ಕೊರೋನ ಪೀಡಿತ ಇಟಲಿ ದೇಶದಿಂದ 263 ಭಾರತೀಯರು ವಾಪಸ್

ಹೊಸದಿಲ್ಲಿ, ಮಾ.22: ಕೊರೋನ ವೈರಸ್‌ಗೆ ಬಲಿಯಾಗಿ ಭೀಕರವಾಗಿ ನಲುಗಿರುವ ಇಟಲಿಯಿಂದ ರವಿವಾರ 263 ಭಾರತೀಯರನ್ನು ತಾಯ್ನಡಿಗೆ ಕರೆ ತರಲಾಗಿದ್ದು, ಎಲ್ಲರನ್ನೂ ಐಟಿಬಿಪಿ(ಇಂಡೋ-ಟಿಬೇಟ್ ಬಾರ್ಡರ್ ಪೊಲೀಸ್)ಕ್ವಾರಂಟೈನ್‌ನಲ್ಲಿ 14 ದಿನಗಳ ಕಾಲ ತೀವ್ರ ನಿಗಾ ಘಟಕದಲ್ಲಿರಿಸಲಾಗಿದೆ.
ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ 263 ಭಾರತೀಯರನ್ನು ಇಟಲಿಯಿಂದ ಕರೆ ತರಲಾಯಿತು. ಇಟಲಿಯ ರೋಮ್‌ನಿಂದ ಹೊರಟ ವಿಮಾನ ಇಂದು ಬೆಳಗ್ಗೆ 10 ಗಂಟೆ ವೇಳೆಗೆ ದಿಲ್ಲಿಗೆ ಬಂದಿಳಿಯಿತು ಎಂದು ಏರ್ ಇಂಡಿಯಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏರ್ ಇಂಡಿಯ ವಿಮಾನವು ಭಾರತೀಯರನ್ನು ಕರೆ ತರಲು ಶನಿವಾರ ದಿಲ್ಲಿಯಿಂದ ಇಟಲಿಗೆ ತೆರಳಿತ್ತು ಎಂದು ತಿಳಿದುಬಂದಿದೆ. ಎಲ್ಲಾ 263 ಭಾರತೀಯರನ್ನು ವಿಮಾನ ನಿಲ್ದಾಣದಲ್ಲಿ ಸ್ಕ್ರೀನಿಂಗ್ ನಡೆಸಿದ ಬಳಿಕ ನೈರುತ್ಯ ದಿಲ್ಲಿಯ ಚಾವ್ಲಾ ಪ್ರದೇಶದಲ್ಲಿ ನಿಗಾ ಘಟಕದಲ್ಲಿ ಇರಿಸಲಾಗಿದೆ. 14 ದಿನಗಳ ಕಾಲ ಕಡ್ಡಾಯವಾಗಿ ನಿಗಾ ಘಟಕದಲ್ಲಿರಿಸಲಾಗುತ್ತದೆ ಎಂದು ಐಟಿಬಿಪಿ ವಕ್ತಾರ ತಿಳಿಸಿದರು.
Next Story





