ಜನತಾ ಕರ್ಫ್ಯೂ: ರಾಜ್ಯ ಸಂಪೂರ್ಣ ಸ್ತಬ್ಧ, ಅನ್ನ- ನೀರಿಲ್ಲದೆ ಪರದಾಡಿದ ಜನತೆ

ಬೆಂಗಳೂರು, ಮಾ. 22: ರಾಜ್ಯದಲ್ಲಿ ಕೊರೋನ ವೈರಸ್ ಸೋಂಕಿನ ಭೀತಿ ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದ್ದು, ಪ್ರಧಾನಿ ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು, ಸಾಂಸ್ಕೃತಿಕ ನಗರಿ ಮೈಸೂರು, ಕರಾವಳಿಯ ದಕ್ಷಿಣ ಕನ್ನಡ ಸೇರಿದಂತೆ ರಾಜ್ಯ ಬಹುತೇಕ ಜಿಲ್ಲೆಗಳು ಯಾವುದೇ ಚಟುವಟಿಗಳಿಲ್ಲದೆ ಸಂಪೂರ್ಣ ಸ್ತಬ್ಧವಾಗಿದ್ದವು.
ಬಸ್, ರೈಲು, ರಿಕ್ಷಾ, ಕ್ಯಾಬ್‌ಗಳು ಸೇರಿ ಸಾರಿಗೆ ವ್ಯವಸ್ಥೆ ಇಲದೆ ಪ್ರಯಾಣಿಕರು, ಹೊಟೇಲ್‌ಗಳು ಬಂದ್ ಮಾಡಿದ್ದರ ಪರಿಣಾಮ ಭಿಕ್ಷುಕರು ಸೇರಿ ಜನತೆ ಅನ್ನ- ನೀರಿಲ್ಲದೆ ಪರದಾಡಬೇಕಾಯಿತು. ಕೆಂಪೇಗೌಡ ಕೇಂದ್ರ ಬಸ್ ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣ, ಕೃಷ್ಣರಾಜೇಂದ್ರ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಿದ್ದವು.
ಸದಾ ಜನಜಂಗುಳಿಯಿಂದ ತುಂಬಿ ತುಳುಕುತ್ತಿದ್ದ ರಾಜ್ಯದ ಬಹುತೇಕ ಬಸ್, ರೈಲ್ವೆ ನಿಲ್ದಾಣಗಳು, ಮಾರುಕಟ್ಟೆ ಪ್ರಾಂಗಣಗಳು ಹಾಗೂ ಪ್ರಮುಖ ರಸ್ತೆಗಳು ಸೇರಿ ಎಲ್ಲೆಡೆ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು. ಜನರು ಮನೆಗಳಲ್ಲಿ ಉಳಿದುಕೊಂಡು ‘ಜನತಾ ಕರ್ಫ್ಯೂ’ಗೆ ಬೆಂಬಲ ನೀಡಿದರು.
ಪರೀಕ್ಷೆ ಮುಂದೂಡಿಕೆ: ಕೊರೋನಾ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ, ತನ್ನ ಡಾಲರ್ಸ್ ಕಾಲನಿಯಲ್ಲಿನ ಧವಳಗಿರಿ ನಿವಾಸದಲ್ಲಿ ಬೆಳ್ಳಬೆಳಗ್ಗೆಯೇ ಅಧಿಕಾರಿಗಳು ಮತ್ತು ಸಹೊದ್ಯೋಗಿ ಸಚಿವರ ಹಲವು ಸುತ್ತಿನ ಸಭೆಗಳನ್ನು ನಡೆಸಿದರು.
ಆ ಬಳಿಕ ಎಸೆಸೆಲ್ಸಿ-ದ್ವಿತಿಯ ಪಿಯುಸಿ ಪರೀಕ್ಷೆಗಳನ್ನು ಮುಂದೂಡಲಾಗುವುದು ಎಂದು ಪ್ರಕಟಿಸಿದರಲ್ಲದೆ, ಸೋಂಕು ತಡೆಗಟ್ಟುವ ದೃಷ್ಟಿಯಿಂದ ರಾಜ್ಯದ ಮಹಾರಾಷ್ಟ್ರ, ತೆಲಂಗಾಣ, ಕೇರಳ, ತಮಿಳುನಾಡು, ಗೋವಾ ಗಡಿಗಳನ್ನು ಮುಚ್ಚಲಾಗುವುದು. ಸೋಂಕು ತಡೆಗಟ್ಟಲು ಸೂಕ್ತ ಮುನ್ನಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜನತೆ ಆತಂಕಪಡುವ ಅಗತ್ಯವಿಲ್ಲ ಎಂದು ಬಿಎಸ್‌ವೈ ಅಭಯ ನೀಡಿದರು.
ಸೋಂಕಿತರ ಸಂಖ್ಯೆ ಏರಿಕೆ: ಕೊರೋನ ಸೋಂಕು ಪೀಡಿತರ ಸಂಖ್ಯೆ ಕ್ಷಣ ಕ್ಷಣಕ್ಕೂ ಏರಿಕೆಯಾಗುತ್ತಿದ್ದು, ಧಾರವಾಡದಲ್ಲಿ ವ್ಯಕ್ತಿಯೊಬ್ಬರಿಗೆ ಸೋಂಕಿರುವುದು ದೃಢಪಟ್ಟಿದ್ದು, ರಾಜ್ಯದಲ್ಲಿ ಕೊರೋನ ಸೋಂಕು ಪೀಡಿತರ ಸಂಖ್ಯೆ 21ಕ್ಕೆ ಏರಿಕೆ ಯಾಗಿದ್ದು, ಸಾಮಾನ್ಯ ಜನರಲ್ಲಿ ಆತಂಕ ಮನೆ ಮಾಡಿದೆ.
ಲಾಕ್‌ಡೌನ್: ನಾಳೆ(ಮಾ.23)ಯಿಂದ 31ರ ವರೆಗೆ ಕೊರೋನ ಸೋಂಕು ಪೀಡಿತರ ಸಂಖ್ಯೆ ಹೆಚ್ಚಿರುವ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮಂಗಳೂರು, ಮೈಸೂರು, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರ, ಕೊಡಗು ಮತ್ತು ಬೆಳಗಾವಿ ಸೇರಿದಂತೆ 9 ಜಿಲ್ಲೆಗಳಲ್ಲಿ ಆಸ್ಪತ್ರೆ, ಔಷಧಿ, ದಿನಸಿ, ಕೃಷಿ ಮೊದಲಾದ ಅಗತ್ಯ ಸೇವೆ ಹೊರತುಪಡಿಸಿ ಉಳಿದ ಇತರೆ ವಾಣಿಜ್ಯ ಚಟುವಟಿಕೆಗಳನ್ನು ಸಂಪೂರ್ಣ ನಿರ್ಬಂಧಿಸಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ನಾಳೆಯೂ ಬಂದ್: ಸೋಂಕಿತರ ಸಂಖ್ಯೆ ಮಿತಿ ಮೀರುತ್ತಿರುವ ಪರಿಣಾಮ ರಾಜ್ಯ ಸರಕಾರ ಪ್ರಸಕ್ತ ವಿದ್ಯಮಾನಗಳನ್ನು ಪರಿಶೀಲಿಸಿ ಕೆಲವು ಮಹತ್ವ ಪೂರ್ವ ನಿರ್ಧಾರಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯದಲ್ಲಿ ನಾಳೆಯೂ ಸಾರ್ವಜನಿಕ ಸಾರಿಗೆ ಸೇವೆಯನ್ನು ರದ್ದು ಮಾಡಲು ತೀರ್ಮಾನಿಸಲಾಗಿದೆ.
ಈಗಾಗಲೇ ಅಂತಾರಾಜ್ಯ ಬಸ್ ಸಂಚಾರ ರದ್ದು ಮಾಡಲಾಗಿದೆ. ಅಲ್ಲದೆ, ಮೆಟ್ರೋ ಸಹಿತ ಎಲ್ಲ ರೈಲ್ವೆ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಜತೆಗೆ ಕೆಎಸ್ಸಾರ್ಟಿಸಿ ಎಲ್ಲ ಹವಾನಿಯಂತ್ರಿತ (ಎಸಿ) ಬಸ್ಸುಗಳ ಸಂಚಾರವನ್ನು ಮಾ.31ರ ವರೆಗೆ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿದೆ.
ನಿಷೇಧಾಜ್ಞೆ: ಮಾ.22ರ ರಾತ್ರಿ 9ರ ವೇಳೆಗೆ ‘ಜನತಾ ಕರ್ಫ್ಯೂ’ ಮುಗಿಯಲಿದೆ. ಆದರೆ, 9 ಗಂಟೆಯಿಂದ 12 ಗಂಟೆಯ ವರೆಗೂ ಕಲಂ 144ರ ಅನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಕೊರೋನ ವೈರಸ್ ಸೋಂಕು ತಡೆಗಟ್ಟುವ ದೃಷ್ಟಿಯಿಂದ ಈ ಮುನ್ನಚ್ಚರಿಕೆ ಕೈಗೊಳ್ಳಲಾಗಿದೆ.
ಮೇಲ್ಕಂಡ 9 ಜಿಲ್ಲೆಗಳಲ್ಲಿ ಕಾರ್ಮಿಕರು ಹೆಚ್ಚಿರುವ ಕೈಗಾರಿಕೆಗಳಲ್ಲಿ, ದಿನ ಬಿಟ್ಟು ದಿನ ಅರ್ಧಸಂಖ್ಯೆಯಲ್ಲಿ ಕಾರ್ಮಿಕರನ್ನು ನಿಯೋಜಿಸುವುದು. ಈ 9 ಜಿಲ್ಲೆಗಳಲ್ಲಿ ಹೊರರಾಜ್ಯಗಳ ಸಾರಿಗೆ ವ್ಯವಸ್ಥೆಯನ್ನು ಮಾ.31ರ ವರೆಗೆ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ.
‘ಜನತಾ ಕರ್ಫ್ಯೂ’ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಸೇರಿ ರಾಜ್ಯದ ಎಲ್ಲ ಜಿಲ್ಲೆ, ತಾಲೂಕು ಮತ್ತು ಹೋಬಳಿ ಕೇಂದ್ರಗಳು ಸೇರಿ ಬಹುತೇಕ ಕಡೆಗಳಲ್ಲಿ ಹಾಲು, ತರಕಾರಿ ಸೇರಿ ಅಗತ್ಯ ವಸ್ತುಗಳಿಗಾಗಿ ಸಾಮಾನ್ಯ ಜನತೆ ಪರದಾಡುತ್ತಿದ್ದ ದೃಶ್ಯ ಎಲ್ಲೆಡೆ ಕಂಡುಬಂತು.
ಬೆರಳೆಣಿಕೆಯಷ್ಟು ಮುನ್ನಚ್ಚರಿಕೆ ಕ್ರಮವಾಗಿ ಜನ ಮುಖಕ್ಕೆ ಮಾಸ್ಕ್ ಹಾಕಿ ಅಲ್ಲಲ್ಲಿ ಸಂಚರಿಸುತ್ತಿದ್ದರು. ಯಾವುದೇ ಅಹಿತಕರ ಘಟನೆ ಸಂಭವಿಸಿದಂತೆ ಮುನ್ನಚ್ಚರಿಕೆ ವಹಿಸಿಲು ನಗರದ ಬಸ್, ರೈಲ್ವೆ ನಿಲ್ದಾಣ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಪೊಲೀಸ್ ಸಿಬ್ಬಂದಿ ಗಸ್ತು ವ್ಯವಸ್ಥೆ ಕಲ್ಪಿಸಲಾಗಿತ್ತು.







