ಮಂಗಳೂರು ಆಸ್ಪತ್ರೆಯಲ್ಲಿರುವ ವ್ಯಕ್ತಿಯಲ್ಲಿ ಕೊರೊನಾವೈರಸ್ ದೃಢ

ಮಂಗಳೂರು, ಮಾ.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಥಮ ಕೊರೋನ ವೈರಸ್ ಸೋಂಕು ಪೀಡಿತ ಪ್ರಕರಣ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಮೂಲದ 22 ವರ್ಷದ ಯುವಕನೋರ್ವನಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಈತ ಮಾ.19ರಂದು ಸಂಜೆ 5:45ಕ್ಕೆ ದುಬೈಯಿಂದ ಸ್ಪೈಸ್ ಜೆಟ್ ಮೂಲಕ ಮಂಗಳೂರು ಆಗಮಿಸಿದ್ದಾನೆ. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದಲ್ಲಿ ಆತನನ್ನು ತಪಾಸಣೆಗೆ ಒಳಪಡಿಸಿದಾಗ ಕೊರೋನ ಶಂಕಿತ ಲಕ್ಷಣಗಳು ಕಂಡುಬಂದಿದ್ದವು. ಈ ಹಿನ್ನೆಲೆಯಲ್ಲಿ ತಕ್ಷಣ ಆ್ಯಂಬುಲೆನ್ಸ್ ಮೂಲಕ ಆತನನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಯ ವಿಶೇಷ ನಿಗಾ ಕೊಠಡಿಗೆ ದಾಖಲಿಸಿ ಚಿಕಿತ್ಸೆ ಆರಂಭಿಸಲಾಗಿತ್ತು. ಯುವಕನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಲ್ಯಾಬ್ ಪರೀಕ್ಷೆಯ ವರದಿ ಬಂದಿದ್ದು, ಯುವಕ ಕೊರೋನ ವೈರಲ್ ಸೋಂಕಿಗೆ ಒಳಗಾಗಿರುವುದು ಖಚಿತಗೊಂಡಿದೆ ಎಂದು ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ಕೊರೋನ ವೈರಸ್ ಸೋಂಕು ಪೀಡಿತ ಈ ಯುವಕ ಅಂದು ದುಬೈಯಿಂದ ಮಂಗಳೂರಿಗೆ ಪ್ರಯಾಣಿಸಿದ್ದ ಆ ವಿಮಾನದಲ್ಲಿ 165 ಪ್ರಯಾಣಿಕರಿದ್ದರು. ಅವರೆಲ್ಲರ ವಿವರಗಳಿದ್ದು, ಎಲ್ಲರನ್ನು ಅವರ ನಿವಾಸಗಳಲ್ಲಿ ನಿಗಾದಲ್ಲಿರುವಂತೆ ಸೂಚಿಸಲಾಗಿದೆ. ಜಿಲ್ಲಾಡಳಿತದ ಮೂಲಕ ಅವರ ಮೇಲೆ ನಿಗಾ ಇಡಲಾಗಿದೆ. ಅವರ ಆರೋಗ್ಯದ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯಲಾಗುತ್ತಿದೆ. ಅವರ್ಯಾರಲ್ಲೂ ಕೊರೋನ ವೈರಸ್ ಸೋಂಕಿನ ಚಿಹ್ನೆಗಳು ಇದುವರೆಗೆ ಕಂಡು ಬಂದಿಲ್ಲ ಎಂದು ಸಿಂಧೂ ಬಿ. ರೂಪೇಶ್ ಸ್ಪಷ್ಟಪಡಿಸಿದ್ದಾರೆ.







