ಚಿಕ್ಕಮಗಳೂರು: ಇಂದು ರಾತ್ರಿ 12ರವರಗೆ 144 ಸೆಕ್ಷನ್ ಜಾರಿ
ಹೋಂಸ್ಟೇ, ರೆಸಾರ್ಟ್‍ಗಳಲ್ಲಿ ಪ್ರವಾಸಿಗರಿಗೆ ನಿರ್ಬಂಧ

ಚಿಕ್ಕಮಗಳೂರು, ಮಾ.22: ಕೊರೋನ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರಕಾರ 9 ಜಿಲ್ಲೆಗಳಲ್ಲಿ ಮಾ.31ರವರೆಗೆ ಶಟ್ ಡೌನ್ ಘೋಷಣೆ ಮಾಡಿ ಆದೇಶಿಸಿರುವ ಬೆನ್ನಲ್ಲೇ ನಗರದಲ್ಲಿ ರಾತ್ರಿ 9ರಿಂದ 12ರವರೆಗೆ 144 ಸೆಕ್ಷನ್ ಜಾರಿ ಮಾಡಿದ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಆದೇಶಿಸಿದ್ದಾರೆ.
ಕೊರೋನ ವೈರಸ್ ವ್ಯಾಪಕವಾಗಿ ಎಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ಅಗತ್ಯ ಮಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದು ಅತ್ಯವಶ್ಯಕವಾಗಿದೆ. ಸೋಂಕು ರಾಜ್ಯಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ತುರ್ತು ಪರಿಸ್ಥಿತಿಯನ್ನು ಘೋಷಣೆ ಮಾಡಿದ್ದು, ವಿಪತ್ತು ನಿರ್ವಹಣಾ ಪ್ರಾಧಿಕಾರ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗೆ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಅಗತ್ಯವಾಗಿರುವ ಕ್ರಮಗಳನ್ನು ಕೈಗೊಳ್ಳುವ ಅಧಿಕಾರದಡಿಯಲ್ಲಿ ಜನರನ್ನು ನಿಯಂತ್ರಿಸುವ ಉದ್ದೇಶದಿಂದ ರವಿವಾರ 9ರಿಂದ 12ರವರೆಗೆ 144 ಸೆಕ್ಷನ್ ಜಾರಿ ಮಾಡಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ರವಿವಾರ ರಾತ್ರಿ 9ರಿಂದ 12ರವರೆಗೆ 144 ಸೆಕ್ಷನ್ ಜಾರಿಯಲ್ಲಿರಲಿದ್ದು, ಜಿಲ್ಲೆಯಲ್ಲಿ ಈ ವೇಳೆ 5 ಜನಕ್ಕಿಂತ ಹೆಚ್ಚಾಗಿ ಗುಂಪು ಸೇರುವುದು, ಸಭೆ ಮಾಡುವುದನ್ನು ನಿಷೇಧಿಸಲಾಗಿದೆ. ಈ ಆದೇಶ ಮದುವೆ, ಧಾರ್ಮಿಕ ಕಾರ್ಯಕ್ರಮ, ಶವ ಸಂಸ್ಕಾರದಂತಹ ಕಾರ್ಯಗಳಿಗೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಲಾಗಿದೆ.
ಅಲ್ಲದೇ ಕೊರೋನ ವೈರಸ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮಾ.23ರಿಂದ ಮುಂದಿನ ಆದೇಶದವರಗೆ ಜಿಲ್ಲೆಯಲ್ಲಿರುವ ಎಲ್ಲ ಹೋಂಸ್ಟೇ, ರೆಸಾರ್ಟ್, ಲಾಡ್ಜ್ ಗಳಲ್ಲಿ ಪ್ರವಾಸಿಗರು ತಂಗದಂತೆ ಹಾಗೂ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಭೇಟಿ ನೀಡಬಾರದೆಂದೂ ಜಿಲ್ಲಾಧಿಕಾರಿ ರವಿವಾರ ಆದೇಶಿಸಿದ್ದಾರೆ. ಈ ಸಂಬಂಧ ಎಲ್ಲ ಲಾಡ್ಜ್, ಹೋಂ ಸ್ಟೇ, ರೆಸಾರ್ಟ್‍ಗಳಿಗೆ ಸೂಚನೆ ನೀಡಿರುವ ಜಿಲ್ಲಾಡಳಿತ ಆದೇಶ ಉಲ್ಲಂಘಿಸುವ ಪ್ರವಾಸಿಗರು ಹಾಗೂ ಹೋಂಸ್ಟೇ, ಲಾಡ್ಜ್ ಮಾಲಕರ ವಿರುದ್ಧ ಕಾನೂನು ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.







