ಬೀಗಮುದ್ರೆ ಹಾಕಲ್ಪಟ್ಟ ನಗರಗಳಲ್ಲಿ ವಾಯು ಗುಣಮಟ್ಟ ಸುಧಾರಣೆ

ವಾಶಿಂಗ್ಟನ್, ಮಾ. 22: ಕೊರೋನವೈರಸ್‌ನಿಂದಾಗಿ ಬೀಗಮುದ್ರೆಯಲ್ಲಿರುವ ದೇಶಗಳಲ್ಲಿ ವಾಯು ಗುಣಮಟ್ಟ ಸುಧಾರಿಸುತ್ತಿದೆ ಎಂದು ಪರಿಣತರು ಹೇಳುತ್ತಾರೆ. ಆದರೆ, ದೀರ್ಘಾವಧಿ ಬದಲಾವಣೆ ಬಗ್ಗೆ ಇಷ್ಟು ಬೇಗ ಏನೂ ಹೇಳಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಡುತ್ತಾರೆ.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ ತೆಗೆದಿರುವ ಚೀನಾದ ವುಹಾನ್ ನಗರದ ಚಿತ್ರಗಳು ಶುಭ್ರವಾಗಿವೆ. ಆ ನಗರದ ನೈಟ್ರೋಜನ್ ಡೈಆಕ್ಸೈಡ್ (ಎನ್‌ಒ2) ಸಾಂದ್ರತೆಯು ಫೆಬ್ರವರಿ ತಿಂಗಳಲ್ಲಿ ಗಣನೀಯವಾಗಿ ಕಡಿಮೆಯಾಗಿತ್ತು. ವುಹಾನ್ ನಗರವು ಕೋವಿಡ್-19 ಸಾಂಕ್ರಾಮಿಕದ ಕೇಂದ್ರಬಿಂದುವಾಗಿತ್ತು.
ವಾಹನಗಳು, ಕೈಗಾರಿಕೆಗಳು ಮತ್ತು ಉಷ್ಣ ವಿದ್ಯುತ್ ಸ್ಥಾವರಗಳಿಂದ ನೈಟ್ರೋಜನ್ ಡೈ ಆಕ್ಸೈಡ್ ಉತ್ಪಾದನೆಯಾಗುತ್ತದೆ.
ಆದರೆ, ಚೀನಾ ಕೊರೋನವೈರಸ್ ಬಿಕ್ಕಟ್ಟಿನಿಂದ ಹೊರಬರಲು ಸಿದ್ಧತೆ ನಡೆಸುತ್ತಿರುವಂತೆಯೇ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ಇಎಸ್‌ಎ) ತೆಗೆದ ಚಿತ್ರಗಳು ನೈಟ್ರೋಜನ್ ಡೈ ಆಕ್ಸೈಡ್ ಹೊರಸೂಸುವಿಕೆಯಲ್ಲಿ ಹೆಚ್ಚಳವಾಗಿರುವುದನ್ನು ತೋರಿಸಿವೆ.
ಅದೇ ವೇಳೆ, ಉತ್ತರ ಇಟಲಿಯಲ್ಲಿ ನೈಟ್ರೋಜನ್ ಡೈಆಕ್ಸೈಡ್ ಹೊರಸೂಸುವಿಕೆ ಪ್ರಮಾಣದಲ್ಲಿ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿರುವುದನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಚಿತ್ರಗಳು ತೋರಿಸಿವೆ. ನೋವೆಲ್ ಕೊರೋನವೈರಸ್ ಹರಡುವಿಕೆಯನ್ನು ನಿಲ್ಲಿಸುವುದಕ್ಕಾಗಿ ಸಂಪೂರ್ಣ ಇಟಲಿಗೆ ಬೀಗಮುದ್ರೆ ಜಡಿಯಲಾಗಿದೆ.
ಸ್ಪೇನ್‌ನ ಬಾರ್ಸಿಲೋನ ಮತ್ತು ಮ್ಯಾಡ್ರಿಡ್ ನಗರಗಳಲ್ಲೂ ನೈಟ್ರೋಜನ್ ಡೈ ಆಕ್ಸೈಡ್ ಪ್ರಮಾಣದಲ್ಲಿ ಗಣನೀಯ ಇಳಿಕೆಯಾಗಿರುವುದಾಗಿ ಯುರೋಪಿಯನ್ ಪರಿಸರ ಸಂಸ್ಥೆ (ಇಇಎ) ವರದಿ ಮಾಡಿದೆ. ಸ್ಪೇನ್ ಸರಕಾರ ಈ ನಗರಗಳಲ್ಲಿ ಮಾರ್ಚ್ ಮಧ್ಯ ಭಾಗದಲ್ಲಿ ಬೀಗಮುದ್ರೆ ಘೋಷಿಸಿದೆ.







