ಚಪ್ಪಾಳೆಯಷ್ಟೇ ಸಾಲದು, ಸಂಪನ್ಮೂಲಗಳು, ಅಗತ್ಯ ಉಪಕರಣಗಳನ್ನೂ ಒದಗಿಸಿ
ಟ್ವಿಟರ್‌ನಲ್ಲಿ ವೈದ್ಯಕೀಯ ವೃತ್ತಿಪರರ ಆಗ್ರಹ

ಹೊಸದಿಲ್ಲಿ, ಮಾ. 22: ಕೊರೋನವೈರಸ್ ಪಿಡುಗು ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿದ್ದ ರವಿವಾರದ ಜನತಾ ಕರ್ಫ್ಯೂ ಸಂದರ್ಭದಲ್ಲಿ ಸೋಂಕಿತರ ಆರೈಕೆಗಾಗಿ ಹಗಲಿರುಳೂ ಶ್ರಮಿಸುತ್ತಿರುವ ವೈದ್ಯರು ಮತ್ತು ಇತರ ಆರೋಗ್ಯ ಸಿಬ್ಬಂದಿಗಳ ಗೌರವಾರ್ಥ ಜನರೆಲ್ಲ ತಮ್ಮ ಮನೆಗಳಿಂದ ಹೊರಬಂದು ಚಪ್ಪಾಳೆಗಳನ್ನು ತಟ್ಟಿದ್ದಾರೆ. ಆದರೆ ಕೊರೋನವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ವೃತ್ತಿಪರರು ಕೇವಲ ಚಪ್ಪಾಳೆೆಗಿಂತ ಹೆಚ್ಚಿನದಕ್ಕಾಗಿ ಆಗ್ರಹಿಸುತ್ತಿದ್ದಾರೆ.
ಕೋವಿಡ್-19 ಮೊದಲು ಉದ್ಭವವಾಗಿದ್ದ ಚೀನಾದಿಂದ ಹಿಡಿದು ಅದರಿಂದ ಪೀಡಿತ ಎಲ್ಲ ದೇಶಗಳನ್ನು ಈ ಪಿಡುಗು ಕಂಗೆಡಿಸಿದೆ. ದಿನೇ ದಿನೇ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಅದಕ್ಕಾಗಿ ವೈದ್ಯಕೀಯ ವ್ಯವಸ್ಥೆಯನ್ನು ಸಜ್ಜಾಗಿಸುವುದನ್ನು ಸವಾಲಾಗಿಸಿದೆ. ಭಾರತದಲ್ಲಂತೂ ಕೊರೋನವೈರಸ್ ರೋಗಿಗಳನ್ನು ರಕ್ಷಿಸಲು ಅಹರ್ನಿಶಿ ದುಡಿಯುತ್ತಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ತಮ್ಮನ್ನು ತಾವು ಸೋಂಕಿನಿಂದ ರಕ್ಷಿಸಿಕೊಳ್ಳವುದೇ ಹರಸಾಹಸವಾಗಿದೆ,ಸೂಕ್ತ ವ್ಯವಸ್ಥೆಗಳು ಮತ್ತು ಉಪಕರಣಗಳ ಕೊರತೆ ಇದಕ್ಕೆ ಕಾರಣವಾಗಿದೆ.
ಉದಾಹರಣೆಗೆ ಪಿಪಿಇ ಎಂದು ಕರೆಯಲಾಗುವ ವೈಯಕ್ತಿಕ ರಕ್ಷಣಾ ಉಪಕರಣವನ್ನೇ ತೆಗೆದುಕೊಳ್ಳಿ. ಕೊರೋನವೈರಸ್ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಮತ್ತು ನರ್ಸ್‌ಗಳು ತಾವು ಸಾಂಕ್ರಾಮಿಕಕ್ಕೆ ಗುರಿಯಾಗುವ ಅಪಾಯದಿಂದ ತಪ್ಪಿಸಿಕೊಳ್ಳಲು ಸಂಪೂರ್ಣ ಶರೀರವನ್ನು ಮುಚ್ಚುವ ಈ ಸೂಟ್‌ಗಳನ್ನು ಧರಿಸುವುದು ಅಗತ್ಯವಾಗಿದೆ.
ಈ ವೈದ್ಯಕೀಯ ವೃತ್ತಿಪರರು ವೈರಸ್ ಸೋಂಕಿಗೊಳಗಾದರೆ ಎರಡು ರೀತಿಗಳಲ್ಲಿ ಹೊಡೆತ ಬೀಳುತ್ತದೆ. ವೈದ್ಯರು,ನರ್ಸ್‌ಗಳು ಮತ್ತು ಇತರ ಸಿಬ್ಬಂದಿ ಸ್ವತಃ ಚಿಕಿತ್ಸೆಗೊಳಗಾಗಬೇಕಾಗುತ್ತದೆ ಅಥವಾ ಇತರರಿಂದ ಪ್ರತ್ಯೇಕವಾಗಿರಬೇಕಾಗುತ್ತದೆ. ಇದರಿಂದ ರೋಗಿಗಳು ಅಗತ್ಯ ವೈದ್ಯಕೀಯ ಸೇವೆಯಿಂದ ವಂಚಿತರಾಗುತ್ತಾರೆ ಮತ್ತು ಈಗಾಗಲೇ ತನ್ನ ಸಾಮರ್ಥ್ಯವನ್ನು ಮೀರಿ ಹೆಣಗಾಡುತ್ತಿರುವ ಆರೋಗ್ಯ ರಕ್ಷಣೆ ವ್ಯವಸ್ಥೆಯ ಮೇಲೆ ಇನ್ನೂ ಹೆಚ್ಚಿನ ಹೊರೆ ಬೀಳುತ್ತದೆ.
ಪಿಪಿಇ ಕೊರತೆೆಯಿಂದಾಗಿ ಕೆಲವು ಪ್ರಕರಣಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೇ ಸೋಂಕಿಗೊಳಗಾಗಿರುವ ನಿದರ್ಶನಗಳಿವೆ.
“ವೈದ್ಯರು ಕೊರೋನವೈರಸ್ ರೋಗಿಯ ನೇರ ಸಂಪರ್ಕಕ್ಕೆ ಬರುವ ಮೊದಲ ವ್ಯಕ್ತಿಯಾಗಿದ್ದಾರೆ ಮತ್ತು ನಾವು ಸುರಕ್ಷಿತರಾಗಿಲು ನಮಗೆ ರಕ್ಷಣಾ ಸಾಧನಗಳ ಅಗತ್ಯವಿದೆ. ಇತ್ತೀಚಿಗಷ್ಟೇ ಲಕ್ನೋದಲ್ಲಿ ವೈದ್ಯರೋರ್ವರು ಕೊರೋನವೈರಸ್ ಸೋಂಕಿಗೊಳಗಾಗಿದ್ದಾರೆ ಮತ್ತು ಅವರ ಇಡೀ ತಂಡವನ್ನು ಪ್ರತ್ಯೇಕ ನಿಗಾದಲ್ಲಿರಿಸಲಾಗಿದೆ” ಎಂದು ಪ್ರೊಗ್ರೆಸಿವ್ ಮೆಡಿಕೋಸ್ ಆ್ಯಂಡ್ ಸೈಂಟಿಸ್ಟ್ಸ್ ಫೋರಮ್‌ನ ಅಧ್ಯಕ್ಷ ಡಾ.ಹರ್ಜಿತ್ ಸಿಂಗ್ ಭಟ್ಟಿ ತಿಳಿಸಿದರು.
ಇದು ಕೇವಲ ಚಪ್ಪಾಳೆ ಸಾಲದು ಎಂಬ ವೈದ್ಯಕೀಯ ವೃತ್ತಿಪರರ ಆಗ್ರಹಕ್ಕೆ ಇಂಬು ನೀಡಿದೆ.
ಗುಣಮಟ್ಟದ ಪಿಪಿಇಗಳ ಕೊರತೆಯಿಂದಾಗಿ ಭಾರತದಲ್ಲಿಯ ಆರೋಗ್ಯ ಸಿಬ್ಬಂದಿಗಳು ಗಂಭೀರ ಸ್ಥಿತಿಯಲ್ಲಿದ್ದಾರೆ. ಆರೋಗ್ಯ ಸಚಿವಾಲಯದಿಂದ ಯಾವುದೇ ನಿರ್ದಿಷ್ಟ ಸೂಚನೆಗಳ ಅನುಪಸ್ಥಿತಿಯಲ್ಲಿ ಏನನ್ನು ಉತ್ಪಾದಿಸಬೇಕು ಎನ್ನುವುದೇ ತಮಗೆ ತಿಳಿದಿಲ್ಲ ಎಂದು ಆರೋಗ್ಯ ರಕ್ಷಣಾ ಉಪಕರಣಗಳ ತಯಾರಕರು ಹೇಳಿರುವುದು ಕಳವಳವನ್ನು ಇನ್ನಷ್ಟು ಹೆಚ್ಚಿಸಿದೆ ಎಂದು ಆಂಗ್ಲ ಮಾಧ್ಯಮವೊಂದು ವರದಿ ಮಾಡಿದೆ.
ಹೊಣೆಯನ್ನು ಜವಳಿ ಸಚಿವಾಲಯಕ್ಕೆ ದಾಟಿಸಿರುವ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೋರ್ವರು,ಇಂತಹ ಸಾಮಗ್ರಿಗಳ ಉತ್ಪಾದನೆಯ ವಿಷಯ ಆ ಸಚಿವಾಲಯಕ್ಕೆ ಸೇರಿದ್ದಾಗಿದೆ ಎಂದು ತಿಳಿಸಿದ್ದಾಗಿ ವರದಿಯು ಉಲ್ಲೇಖಿಸಿದೆ.
ಫೆ.12ರ ಬಳಿಕ ನಾವು ಆರೋಗ್ಯ ಸಚಿವಾಲಯಕ್ಕೆ ಹಲವಾರು ಪತ್ರಗಳನ್ನು ಬರೆದಿದ್ದೇವೆ,ಹಲವಾರು ಅಧಿಕಾರಿಗಳನ್ನೂ ಭೇಟಿಯಾಗಿದ್ದೇವೆ ಎಂದು ಹೇಳಿದ ಪ್ರೊಟೆಕ್ಷನ್ ವೇರ್ ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇಂಡಿಯಾದ ಅಧ್ಯಕ್ಷ ಡಾ.ಸಂಜೀವ ಅವರು,ಒಂದು ತಿಂಗಳಾದರೂ ನಿರ್ದಿಷ್ಟ ಸೂಚನೆಗಳನ್ನು ನೀಡಲು ಅವರಿಗೆ ಸಾಧ್ಯವಾಗಿಲ್ಲ. ಇದು ಇಂತಹ ಗಂಭೀರ ವಿಷಯದ ಬಗ್ಗೆ ಅವರ ದಿವ್ಯನಿರ್ಲಕ್ಷವನ್ನು ತೋರಿಸುತ್ತದೆ ಎಂದರು.
ಕೋವಿಡ್-19 ರೋಗಿಗಳಿಗೆ ಚಿಕಿತ್ಸೆಯು ವೆಂಟಿಲೇಟರ್ ಸಹಿತ ತೀವ್ರ ನಿಗಾ ಘಟಕ(ಐಸಿಯು)ಗಳ ಲಭ್ಯತೆಯನ್ನು ಪ್ರಮುಖವಾಗಿ ಅವಲಂಬಿಸಿದೆ. ಭಾರತದಲ್ಲಿ ಪ್ರತಿ ಒಂದು ಲಕ್ಷ ಜನರಿಗೆ ಕೇವಲ 2.3 ಐಸಿಯು ಹಾಸಿಗೆಗಳಿವೆ. ಚೀನಾಕ್ಕಿಂತಲೂ ಹೆಚ್ಚು ಸಾವುಗಳು ಸಂಭವಿಸಿರುವ ಇಟಲಿಯಲ್ಲಿ ಪ್ರತಿ ಒಂದು ಲಕ್ಷ ಜನರಿಗೆ 12.5 ಐಸಿಯು ಹಾಸಿಗೆಗಳಿವೆ. ದೇಶದಲ್ಲಿ ವೆಂಟಿಲೇಟರ್‌ಗಳ ತಯಾರಿಕೆಯನ್ನು ಹೆಚ್ಚಿಸಲು ಸರಕಾರವು ಯೋಜಿಸಿದೆಯಾದರೂ ಅಂತರರಾಷ್ಟ್ರೀಯ ವಿಮಾನಯಾನಗಳು ಸ್ಥಗಿತಗೊಂಡಿರುವುದರಿಂದ ಮುಖ್ಯವಾದ ಬಿಡಿಭಾಗಗಳು ಭಾರತವನ್ನು ತಲುಪದಿರಬಹುದು.







