ಇರಾನ್: ಹೊಸದಾಗಿ 129 ಸಾವು
1,028 ಹೊಸ ಕೊರೋನವೈರಸ್ ಸೋಂಕು

ಟೆಹರಾನ್ (ಇರಾನ್), ಮಾ. 22: ನೋವೆಲ್-ಕೊರೋನವೈರಸ್‌ನಿಂದಾಗಿ ಹೊಸದಾಗಿ 129 ಸಾವುಗಳು ಸಂಭವಿಸಿವೆ ಎಂದು ಇರಾನ್ ರವಿವಾರ ವರದಿ ಮಾಡಿದೆ. ಇದರೊಂದಿಗೆ ದೇಶದ ಅಧಿಕೃತ ಸಾವಿನ ಸಂಖ್ಯೆ 1,685ಕ್ಕೆ ಏರಿದೆ.
ಕಳೆದ 24 ಗಂಟೆಗಳ ಅವಧಿಯಲ್ಲಿ 1,028 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಇರಾನ್‌ನ ಆರೋಗ್ಯ ಸಚಿವಾಲಯದ ವಕ್ತಾರರೊಬ್ಬರು ತಿಳಿಸಿದರು. ಈ ಮೂಲಕ, ದೇಶದಲ್ಲಿ ಕೋವಿಡ್-19 ಸೋಂಕಿಗೆ ಒಳಗಾದವರ ಸಂಖ್ಯೆ 21,638ಕ್ಕೆ ಏರಿದೆ.
ಇರಾನ್‌ಗೆ ಕೊರೋನವೈರಸ್ ಕಳುಹಿಸಿದ್ದು ಅಮೆರಿಕ: ಆಯತುಲ್ಲಾ ಖಾಮಿನೈ ಆರೋಪ
ಇರಾನ್‌ಗೆ ಕೊರೋನವೈರಸನ್ನು ಕಳುಹಿಸಿದ್ದೇ ಅಮೆರಿಕ, ಹಾಗಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವುದಕ್ಕಾಗಿ ಅಮೆರಿಕ ನೀಡುವ ಯಾವುದೇ ನೆರವನ್ನು ಸ್ವೀಕರಿಸುವುದು ಅಸಾಧ್ಯ ಎಂದು ಇರಾನ್‌ನ ಸವೋಚ್ಛ ನಾಯಕ ಆಯತುಲ್ಲಾ ಖಾಮಿನೈ ಹೇಳಿದ್ದಾರೆ.
‘‘ಕೊರೋನವೈರಸನ್ನು ಸೃಷ್ಟಿಸಿದ್ದು ನೀವು ಎಂಬ ಆರೋಪವಿದೆ. ಈ ಆರೋಪ ಎಷ್ಟು ಸತ್ಯ ಎಂದು ನನಗೆ ಗೊತ್ತಿಲ್ಲ. ಆದರೆ, ಈ ಆರೋಪ ಇರುವವರೆಗೆ ನೀವು ಕೊಡುವ ನೆರವನ್ನು ಸ್ವೀಕರಿಸಲು ಯಾವ ವ್ಯಕ್ತಿ ಮುಂದೆ ಬರುತ್ತಾನೆ?’’ ಎಂದು ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಾತನಾಡಿದ 80 ವರ್ಷದ ಧಾರ್ಮಿಕ ನಾಯಕ ಹೇಳಿದರು.





