ಕೊರೋನ ನಿಯಂತ್ರಣದ ಸೇವೆಗೆ ಕೃತಜ್ಞತೆ ಸಲ್ಲಿಸಿದ ಉಡುಪಿ ಜನತೆ

ಉಡುಪಿ, ಮಾ.22: ಕೊರೋನ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಕರೆ ನೀಡಿರುವ ಜನತಾ ಕರ್ಫೂಗೆ ಪೂರಕವಾಗಿ ಇಂದು ಸಂಜೆ ಐದು ಗಂಟೆಗೆ ಉಡುಪಿ ಜನತೆ ವಿವಿಧ ರೀತಿಯಲ್ಲಿ ಕೊರೊನ ವೈರಸ್ ನಿಯಂತ್ರಣಕ್ಕೆ ಶ್ರಮಿಸುತ್ತಿರುವ ಆರೋಗ್ಯ ಕ್ಷೇತ್ರ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.
ವಸತಿ ಸಮುಚ್ಛಯದ ನಿವಾಸಿಗಳು ಕುಟುಂಬ ಸಮೇತರಾಗಿ ಬಾಲ್ಕನಿ ಹಾಗೂ ಕಿಟಕಿ ಮೂಲಕ ಚಪ್ಪಾಳೆ ತಟ್ಟುವ, ಜಾಗಟೆ ಬಾರಿಸುವ ಹಾಗೂ ಶಂಖ ಊದುವ ಮೂಲಕ ಕೃತಜ್ಞತೆಯನ್ನು ಸಲ್ಲಿಸಿದರು. ಕಲ್ಯಾಣಪುರ ಸಂತೆಕಟ್ಟೆಯಲ್ಲಿ ಕುಟುಂಬವೊಂದು ಚಂಡೆ, ಶಂಖ, ಜಾಗಟೆ ಬಾರಿಸುವ ಮೂಲಕ ವಿಶಿಷ್ಟ ರೀತಿಯನ್ನು ಕೃತಜ್ಞತೆ ಸಲ್ಲಿಸಿತು.
ಅದೇ ರೀತಿ ಶ್ರೀಕೃಷ್ಣ ಮಠದಲ್ಲಿ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಮಠದ ಮಹಾಪೂಜೆ ಗಂಟೆಯನ್ನು ಭಾರಿಸುವ ಮೂಲಕ ಆರೋಗ್ಯ ಕ್ಷೇತ್ರದ ಸಿಬ್ಬಂದಿಗೆ ಹಾಗೂ ಪ್ರಧಾನ ಮಂತ್ರಿಯವರಿಗೆ ಗೌರವ ಸಲ್ಲಿಸುವುದರೊಂದಿಗೆ ಜಾಗೃತಿ ಮೂಡಿಸಿದರು.
ಅದೇ ರೀತಿ ಕಾಣಿಯೂರು ಸ್ವಾಮೀಜಿ ತಮ್ಮ ಮಠದ ಬಾಲ್ಕನಿಯಲ್ಲಿ ಹಾಗೂ ಪಲಿಮಾರು ಸ್ವಾಮೀಜಿ ಪಲಿಮಾರು ಮಠದಲ್ಲಿ ಜಾಗಟೆ ಹಾಗೂ ಚಪ್ಪಲೆ ತಟ್ಟುವ ಮೂಲಕ ಕೃತಜ್ಞತೆ ಅರ್ಪಿಸಿದರು. ಉಡುಪಿ ಜಿಲ್ಲೆಯ ಹಲವು ಚರ್ಚ್ ಗಳಲ್ಲಿ ಗಂಟೆ ಬಾರಿಸುವ ಮೂಲಕ ಆರೋಗ್ಯ ಸೇವೆಗೆ ಗೌರವ ಸೂಚಿಸಲಾಯಿತು.







