ಕೊರೋನ ಭೀತಿ: ವಿದೇಶದಿಂದ ಬಂದವನನ್ನು ಬಲವಂತವಾಗಿ ಆಸ್ಪತ್ರೆಗೆ ದಾಖಲಿಸಿದ ಗ್ರಾಮಸ್ಥರು

ಸಾಂದರ್ಭಿಕ ಚಿತ್ರ
ಬಾಗಲಕೋಟೆ, ಮಾ.22: ವಾರದ ಹಿಂದೆ ಮಲೇಶಿಯಾದಿಂದ ಹುನಗುಂದ ತಾಲೂಕಿನ ಗ್ರಾಮವೊಂದಕ್ಕೆ ಮರಳಿದ್ದ ಯುವಕನನ್ನು ಗ್ರಾಮಸ್ಥರು ಆಂಬುಲೆನ್ಸ್ ಮೂಲಕ ಬಾಗಲಕೋಟೆ ಜಿಲ್ಲಾ ಆಸ್ಪತ್ರೆಗೆ ಬಲವಂತವಾಗಿ ಕರೆತಂದು ಐಸೊಲೇಶನ್ ವಾರ್ಡ್ನಲ್ಲಿ ಚಿಕಿತ್ಸೆ ಪಡೆಯುವಂತೆ ಮಾಡಿದ್ದಾರೆ.
ಯುವಕ ಜ್ವರದಿಂದ ಬಳಲುತ್ತಿದ್ದನು. ವಿದೇಶದಿಂದ ಮರಳಿದ್ದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಹೆದರಿದ್ದರು. ಆಂಬುಲೆನ್ಸ್ ಕಳಿಸಿ ಕರೆತಂದು ಚಿಕಿತ್ಸೆ ನೀಡಿದ್ದೇವೆ. ಈಗ ಚೇತರಿಸಿಕೊಂಡಿದ್ದಾನೆ. ಮೇಲ್ನೋಟಕ್ಕೆ ಕೊರೋನ ವೈರಸ್ ಸೋಂಕು ಪೀಡಿತ ಅನ್ನಿಸುತ್ತಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದೇವೆ ಎಂದು ಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಬಿರಾದಾರ ತಿಳಿಸಿದರು.
ವಿಡಿಯೊ ವೈರಲ್: ಯುವಕನನ್ನು ಗ್ರಾಮದಿಂದ ಆಂಬುಲೆನ್ಸ್ ಮೂಲಕ ಕರೆದೊಯ್ಯುವ ವಿಡಿಯೊ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದೆ. ಜೊತೆಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದೆ(ಪಾಸಿಟಿವ್) ಎಂಬ ವದಂತಿಯೂ ಹರಡಿದೆ. ಹೀಗಾಗಿ ಹುನಗುಂದ ಗ್ರಾಮೀಣ ಭಾಗದಲ್ಲಿ ಆತಂಕದ ಕಾರ್ಮೋಡ ಆವರಿಸಿದೆ.





