ಚಿಕ್ಕಮಗಳೂರು: ನಗರದಲ್ಲಿ ಓಡಾಡುತ್ತಿದ್ದ ವಿದೇಶದಿಂದ ಹಿಂದಿರುಗಿದ್ದ ವ್ಯಕ್ತಿ ಪೊಲೀಸ್ ವಶಕ್ಕೆ

ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಮಾ.22: ವಿದೇಶದಿಂದ ಕಳೆದ ವಾರ ನಗರಕ್ಕಾಮಿಸಿದ್ದ ವ್ಯಕ್ತಿಯೊಬ್ಬರು ಜಿಲ್ಲಾಡಳಿತದ ಸೂಚನೆಯನ್ನು ಧಿಕ್ಕರಿಸಿ ನಗರದಲ್ಲಿ ಓಡಾಡುತ್ತಿದ್ದ ಆರೋಪದ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದಿರುವ ಘಟನೆ ವರದಿಯಾಗಿದೆ.
ಕಳೆದ ವಾರ ದುಬೈಯಿಂದ ನಗರಕ್ಕಾಗಮಿಸಿದ್ದ 30 ವರ್ಷದ ವ್ಯಕ್ತಿಯನ್ನು ಸಂಪರ್ಕಿಸಿದ್ದ ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆ ಆತನ ಮನೆಗೆ ಭೇಟಿ ನೀಡಿ ಸೋಂಕು ಇಲ್ಲದಿರುವುದನ್ನು ಖಾತ್ರಿ ಮಾಡಿಕೊಂಡಿದ್ದರು. ಅಲ್ಲದೇ 14 ದಿನಗಳ ಕಾಲ ಮನೆಯಲ್ಲಿ ಪ್ರತ್ಯೇಕವಾಗಿದ್ದು, ಮನೆಯಿಂದ ಹೊರಗೆ ತಿರುಗಾಡದಂತೆ ಸೂಚನೆ ನೀಡಲಾಗಿತ್ತು. ಆದರೆ ರವಿವಾರ ಮನೆಯಿಂದ ಹೊರಗೆ ಬಂದಿದ್ದ ವ್ಯಕ್ತಿ ನಗರದ ವಿವಿಧೆಡೆ ತಿರುಗಾಡುತ್ತಿದ್ದರು ಎನ್ನಲಾಗಿದ್ದು, ಇದರ ಮಾಹಿತಿ ಪಡೆದ ಜಿಲ್ಲಾ ಆರೋಗ್ಯ ಇಲಾಖೆಯ ಸರ್ವೇಕ್ಷಣಾಧಿಕಾರಿ ಡಾ.ಮಂಜುನಾಥ್ ನಗರದ ಬಸವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆಂದು ತಿಳಿದು ಬಂದಿದೆ.
ಬಳಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸರು ಆತನಿಗೆ ಸೋಂಕಿನ ಗಂಭೀರತೆಯನ್ನು ಮನವರಿಕೆ ಮಾಡಿ ನಗರದ ಮಧುವನ ಬಡಾವಣೆಯಲ್ಲಿ ಕೊರೋನ ಸೋಂಕು ಶಂಕಿತರ ವಿಶೇಷ ನಿಗಾ ಘಟಕಕ್ಕೆ ದಾಖಲು ಮಾಡಿದ್ದಾರೆಂದು ತಿಳಿದು ಬಂದಿದೆ.





