ಹರ್ಷ ಮಂದರ್ ಬೆಂಬಲಿಸಿ 95 ನಿವೃತ್ತ ಐಎಎಸ್ ಅಧಿಕಾರಿಗಳಿಂದ ಬಹಿರಂಗ ಪತ್ರ
ಹೊಸದಿಲ್ಲಿ: ಒಟ್ಟು 95 ಮಂದಿ ನಿವೃತ್ತ ಐಎಎಸ್ ಅಧಿಕಾರಿಗಳನ್ನೊಳಗೊಂಡ ಕಾನ್ ಸ್ಟಿಟ್ಯೂಶನಲ್ ಗ್ರೂಪ್ ಎಂಬ ಸಂಘಟನೆ ರವಿವಾರ ಸಾಮಾಜಿಕ ಹೋರಾಟಗಾರ ಹರ್ಷ ಮಂದರ್ ಅವರನ್ನು ಸಮರ್ಥಿಸಿ ಬಹಿರಂಗ ಪತ್ರ ಬರೆದಿದ್ದು, ಸಾಲಿಸಿಟರ್ ಜನರಲ್ ಹಾಗೂ ದಿಲ್ಲಿ ಪೊಲೀಸರು ಸುಪ್ರೀಂ ಕೋರ್ಟ್ ಅನ್ನು ತಪ್ಪು ದಾರಿಗೆಳೆದಿದ್ದಾರೆಂದು ಪತ್ರದಲ್ಲಿ ಆರೋಪಿಸಲಾಗಿದೆ.
ಹಿಂಸೆಯನ್ನು ಪ್ರೇರೇಪಿಸಿದ್ದಾರೆ ಹಾಗೂ ಸುಪ್ರೀಂ ಕೋರ್ಟಿಗೆ ಅಗೌರವ ತೋರಿದ್ದಾರೆಂದು ಹರ್ಷ ಮಂದರ್ ವಿರುದ್ಧ ದಿಲ್ಲಿ ಪೊಲೀಸರು ಹಾಗೂ ಸಾಲಿಸಿಟರ್ ಜನರಲ್ ಆರೋಪ ಹೊರಿಸಿದ್ದರು.
ದ್ವೇಷದ ಭಾಷಣ ಮಾಡಿದ್ದ ಬಿಜೆಪಿ ನಾಯಕರಾದ ಕಪಿಲ್ ಮಿಶ್ರಾ, ಅನುರಾಗ್ ಠಾಕುರ್ ಹಾಗೂ ಪರ್ವೇಶ್ ಸಾಹಿಬ್ ಸಿಂಗ್ ಹಾಗೂ ಅಭಯ್ ವರ್ಮಾ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಕೋರಿ ಮಂದರ್ ಸುಪ್ರೀಂ ಕದ ತಟ್ಟಿದ್ದರು. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾದಲ್ಲಿ ಮಂದರ್ ಸುಪ್ರೀಂ ಕೋರ್ಟನ್ನು ನಿಂದಿಸಿದ್ದರೆಂದು ದಿಲ್ಲಿ ಪೊಲೀಸರು ಹಆಗೂ ಸಾಲಿಸಿಟರ್ ಜನರಲ್ ಆರೋಪಿಸಿದ್ದರು. ಮಂದರ್ ಭಾಷಣ ಕುರಿತಾದ ಪ್ರಕರಣ ಇತ್ಯರ್ಥಗೊಳಿಸುವ ತನಕ ಅವರ ಅಪೀಲನ್ನು ಪರಿಗಣಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿತ್ತು.
"ಮಂದರ್ ಅವರ ಭಾಷಣದ ವೀಡಿಯೋವನ್ನು ಆಯ್ದ ಭಾಗಗಳಲ್ಲಿ ಎಡಿಟ್ ಮಾಡಲಾಗಿತ್ತು ಹಾಗೂ ಈ ಮೂಲಕ ಅವರು ಸುಪ್ರೀಂ ಕೋರ್ಟನ್ನು ನಿಂದಿಸಿದ್ದಾರೆಂದು ಬಿಂಬಿಸುವ ಯತ್ನ ಮಾಡಲಾಗಿತ್ತು, ಮಂದರ್ ಅವರ ಭಾಷಣದ ಉದ್ದೇಶ ತಿಳಿಯಲು ಸಂಪೂರ್ಣ ಮೂಲ ವೀಡಿಯೋವನ್ನು ನೋಡಬೇಕಿದೆ'' ಎಂದು ಬಹಿರಂಗ ಪತ್ರದಲ್ಲಿ ಹೇಳಿರುವ ನಿವೃತ್ತ ಐಎಎಸ್ ಅಧಿಕಾರಿಗಳು "ಸಾಲಿಸಿಟರ್ ಜನರಲ್ ಹಾಗೂ ದಿಲ್ಲಿ ಡಿಸಿಪಿ ವಿರುದ್ಧ ಈ ಎಡಿಟ್ ಮಾಡಲ್ಪಟ್ಟ ವೀಡಿಯೋ ಪ್ರಸ್ತುತಪಡಿಸಿದ್ದಕ್ಕೆ ಮಾನನಷ್ಟ ಮೊಕದ್ದಮೆ ಕೂಡ ದಾಖಲಿಸುವ ಅವಕಾಶವಿದೆ'' ಎಂದು ಹೇಳಿದ್ದಾರೆ.