ಕೊರೋನ ವೈರಸ್ ಲಕ್ಷಣಗಳಿಂದ ಆತಂಕಗೊಂಡಿದ್ದೀರಾ: ನೀವು ಏನು ಮಾಡಬೇಕು, ಏನು ಮಾಡಬಾರದು ?
ಇಲ್ಲಿದೆ ವಿವರ

ಹೊಸದಿಲ್ಲಿ, ಮಾ. 23: ಹೆಚ್ಚುತ್ತಿರುವ ಕೊರೋನವೈರಸ್ ಸೋಂಕು ಪ್ರಕರಣಗಳಿಂದ ವಿಶ್ವಾದ್ಯಂತ ಜನರು ಆತಂಕದಲ್ಲಿದ್ದಾರೆ. ಫ್ಲೂದಂತಹ ಸಣ್ಣ ಜ್ವರ ನಿಮ್ಮನ್ನು ಕಾಡುತ್ತಿದ್ದರೆ ಮತ್ತು ಕೊರೋನವೈರಸ್ ಲಕ್ಷಣಗಳು ನಿಮ್ಮಲ್ಲಿವೆಯೆಂದು ನೀವು ಚಿಂತೆಗೊಳಗಾಗಿದ್ದರೆ ನೀವೇನು ಮಾಡಬೇಕು?
ಕೊರೋನವೈರಸ್ ಪರೀಕ್ಷೆಗಳನ್ನು ನಡೆಸುವ ಸರಕಾರಿ ಆಸ್ಪತ್ರೆಗಳಿಗೆ ಧಾವಿಸಬೇಡಿ. ಅಲ್ಲಿ ಜನದಟ್ಟಣೆಯಿಂದಾಗಿ ನೀವು ಸುದೀರ್ಘ ಕಾಲ ಕಾಯಬೇಕಾಗಬಹುದು ಮತ್ತು ಹೀಗೆ ಕಾಯುತ್ತಿರುವಾಗ ನೀವು ವೈರಸ್‌ನ ಸೋಂಕಿಗೆ ಗುರಿಯಾಗಬಹುದು. ಕಳೆದ 14 ದಿನಗಳಲ್ಲಿ ನೀವು ಯಾವುದೇ ಕೊರೋನಬಾಧಿತ ವಿದೇಶಕ್ಕೆ ಭೇಟಿ ನೀಡಿದ್ದರೆ ಅಥವಾ ಕೊರೋನವೈರಸ್ ಸೋಂಕು ದೃಢಪಟ್ಟಿರುವ ರೋಗಿಯ ಸಂಪರ್ಕ ಹೊಂದಿದ್ದರೆ ಮತ್ತು ವಿಶೇಷವಾಗಿ ಜ್ವರ ಮತ್ತು ಒಣಕೆಮ್ಮಿನಿಂದ ಬಳಲುತ್ತಿದ್ದರೆ ನೀವು ಕೊರೋನವೈರಸ್ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯವಾಗಬಹುದು.
ದುರದೃಷ್ಟವಶಾತ್ ಕೆಲವೇ ಖಾಸಗಿ ಲ್ಯಾಬ್‌ಗಳಿಗೆ ಕೊರೋನವೈರಸ್ ಪರೀಕ್ಷೆ ನಡೆಸಲು ಅನುಮತಿ ನೀಡಲಾಗಿದೆ,ಆದರೆ ಕೆಲವೊಂದು ನಿರ್ಬಂಧಗಳಿಂದಾಗಿ ಅವಿನ್ನೂ ಪೂರ್ಣ ಪ್ರಮಾಣದಲ್ಲಿ ಕೆಲಸವನ್ನು ಪ್ರಾರಂಭಿಸಿಲ್ಲ. ಈ ನಿರ್ಬಂಧಗಳನ್ನು ನಿವಾರಿಸಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಿದ್ದಾರೆ ಮತ್ತು ಅದಕ್ಕೆ ತನ್ನದೇ ಆದ ಸಮಯಾವಕಾಶ ಬೇಕಾಗಬಹುದು. ಹೀಗಾಗಿ ಸರಕಾರಿ ಆಸ್ಪತ್ರೆಗೆ ಅಥವಾ ಸಹಾಯವಾಣಿಗೆ ದೂರವಾಣಿ ಕರೆಯನ್ನು ಮಾಡಿ ನಿಮ್ಮ ಗಂಟಲಿನ ದ್ರಾವಣ ಇತ್ಯಾದಿ ಸ್ಯಾಂಪಲ್‌ಗಳನ್ನು ಸಂಗ್ರಹಿಸಲು ನಿಮ್ಮ ಮನೆಗೆ ಯಾರನ್ನಾದರೂ ಕಳುಹಿಸುವಂತೆ ಕೇಳಿಕೊಳ್ಳಿ. ನಿಯಮದಂತೆ ಅವರು ನಿಮ್ಮ ಮನೆಗೆ ಬಂದು ಸ್ಯಾಂಪಲ್‌ಗಳನ್ನು ಸಂಗ್ರಹಿಸಬೇಕು. ಅವರು ಬರಲು ಒಪ್ಪದಿದ್ದರೆ ಆಸ್ಪತ್ರೆಯಲ್ಲಿ ಉದ್ದನೆಯ ಸರದಿ ಸಾಲುಗಳಿದ್ದರೆ ಅಲ್ಲಿಗೆ ಹೋಗಲೇಬೇಡಿ,ಏಕೆಂದರೆ ಅಲ್ಲಿ ನಿಮಗೆ ಕೊರೋನವೈರಸ್ ಸೋಂಕು ತಗಲುವ ಅತ್ಯಂತ ಹೆಚ್ಚಿನ ಸಾಧ್ಯತೆಯಿರುತ್ತದೆ. ನೀವು ಮನೆಯಲ್ಲಿ ಸ್ವಯಂ ನಿರ್ಬಂಧದಲ್ಲಿರಬಹುದೇ ಎಂಬ ಬಗ್ಗೆ ನಿಮ್ಮ ವೈದ್ಯರನ್ನು ಕೇಳಿ. ಆದರೆ ನೀವು ಆಸ್ಪತ್ರೆಗೆ ಹೋಗಲೇಬೇಕು ಮತ್ತು ಪರೀಕ್ಷೆಯನ್ನು ಮಾಡಿಸಿಕೊಳ್ಳಲೇಬೇಕು ಎಂದಿದ್ದರೆ ಅಲ್ಲಿ ಸರದಿಯಿಂದ ದೂರದಲ್ಲಿ ನಿಂತುಕೊಳ್ಳಲು ಪ್ರಯತ್ನಿಸಿ,ಈ ವೇಳೆ ಮಾಸ್ಕ್ಕ್ ಧರಿಸಿರಬೇಕು ಮತ್ತು ಸ್ಯಾನಿಟೈಸರ್ ನಿಮ್ಮ ಬಳಿಯಲ್ಲಿರಲಿ. ಪರೀಕ್ಷೆಯ ವರದಿ ಬರಲು ಕನಿಷ್ಠ ನಾಲ್ಕು ದಿನಗಳು ಬೇಕಾಗುವುದರಿಂದ ಮನೆಯಲ್ಲಿಯೇ ಪ್ರತ್ಯೇಕ ನಿಗಾದಲ್ಲಿರಲು ಅವಕಾಶ ನೀಡುವಂತೆ ಮತ್ತು ಆಸ್ಪತ್ರೆಯಲ್ಲಿ ಪ್ರತ್ಯೇಕ ವಾರ್ಡಿನಲ್ಲಿ ಉಳಿದುಕೊಳ್ಳಲು ಬಲವಂತ ಮಾಡಬೇಡಿ ಎಂದು ಅಲ್ಲಿಯ ವೈದ್ಯರನ್ನು ಕೇಳಿಕೊಳ್ಳಿ. ಏಕೆಂದರೆ ಇಂತಹ ಪ್ರತ್ಯೇಕ ವಾರ್ಡ್‌ಗಳಲ್ಲಿ ನಿಮ್ಮ ಸುತ್ತಲೂ ಸೋಂಕುಪೀಡಿತರೇ ಇರುತ್ತಾರೆ.
ಕಳೆದ ಕೆಲವು ದಿನಗಳಲ್ಲಿ ನೀವು ಭೇಟಿಯಾಗಿದ್ದ ಎಲ್ಲ ಜನರ ಪಟ್ಟಿಯೊಂದನ್ನು ಮಾಡಿ. ನೀವು ಅಸ್ವಸ್ಥಗೊಂಡಿದ್ದೀರಿ ಮತ್ತು ಕೊರೋನವೈರಸ್ ಸೋಂಕು ದೃಢ ಪಟ್ಟಿಲ್ಲವಾದರೂ ಮುನ್ನೆಚ್ಚರಿಕೆ ಕ್ರಮವಾಗಿ ಮನೆಯಲ್ಲಿಯೇ ಸ್ವಯಂ ನಿರ್ಬಂಧದ ಲ್ಲಿರುವುದಾಗಿ ಅವರೆಲ್ಲರಿಗೂ ತಿಳಿಸಿ. ಕೊರೋನಪೀಡಿತ ದೇಶದಿಂದ ಇತ್ತೀಚಿಗೆ ಭಾರತಕ್ಕೆ ಮರಳಿರುವ ವ್ಯಕ್ತಿಯೊಂದಿಗೆ ನೀವು ಸಂಪರ್ಕದಲ್ಲಿದ್ದರಂತೂ ನೀವು ಈ ಕೆಲಸವನ್ನು ಮಾಡುವದು ಹೆಚ್ಚು ಮುಖ್ಯವಾಗಿದೆ.
ನಿಮ್ಮ ಮನೆಯೊಳಗೆ ಯಾವಾಗಲೂ ಕುಟುಂಬದ ಇತರ ಸದಸ್ಯರೊಡನೆ ಕನಿಷ್ಠ ಆರು ಅಡಿ ಅಂತರವನ್ನು ಕಾಯ್ದುಕೊಳ್ಳಿ. ಮನೆಯಲ್ಲಿ ಹಿರಿಯರಿದ್ದರೆ ಅವರು ಸೋಂಕಿಗೆ ಸುಲಭಭೇದ್ಯರಾಗಿರುವುದರಿಂದ ಇದನ್ನು ಕಡ್ಡಾಯವಾಗಿ ಪಾಲಿಸಿ. ಎಲ್ಲ ಬಾಗಿಲಿನ ಹಿಡಿಕೆಗಳು, ನಾಬ್‌ಗಳು ಮತ್ತು ನೀವು ಸ್ಪರ್ಶಿಸಬಹುದಾದ ಎಲ್ಲ ಮೇಲ್ಮೈಗಳನ್ನು ಬ್ಯಾಕ್ಟೀರಿಯಾ ನಿರೋಧಕಗಳನ್ನು ಬಳಸಿ ಸ್ವಚ್ಛಗೊಳಿಸಿ. ಏಕೆಂದರೆ ಇಂತಹ ಮೇಲ್ಮೈಗಳ ಮೇಲೆ ಕೊರೋನ ವೈರಸ್ ಎಂಟು ಅಥವಾ ಅದಕ್ಕಿಂತ ಹೆಚ್ಚು ಸಮಯ ಬದುಕಿರುತ್ತದೆ. ನೀವು ಆಹಾರ ಮತ್ತು ಪಾನೀಯ ಸೇವನೆಗಾಗಿ ಬಳಸುವ ಪ್ಲೇಟ್,ಗ್ಲಾಸ್ ಇತ್ಯಾದಿಗಳನ್ನು ಪ್ರತಿ ಬಾರಿ ಉಪಯೋಗದ ಬಳಿಕ ಸ್ಯಾನಿಟೈಸ್ ಮಾಡಿ ಮತ್ತು ಅವುಗಳನ್ನು ನಿಮ್ಮ ಬಳಕೆಗಾಗಿಯೇ ಪ್ರತ್ಯೇಕವಾಗಿಟ್ಟುಕೊಳ್ಳಿ.
ನಿಮ್ಮ ವೈದ್ಯರೊಂದಿಗೆ ನಿರಂತರ ಸಂಪರ್ಕವನ್ನು ಇಟ್ಟುಕೊಳ್ಳಿ ಮತ್ತು ಅವರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ. ವಾಟ್ಸಾಪ್ ಅಥವಾ ಯಾವುದೇ ಸಾಮಾಜಿಕ ಜಾಲತಾಣದಲ್ಲಿಯ ಚಿಕಿತ್ಸಾ ಸಲಹೆಗಳನ್ನು ಅನುಸರಿಸಬೇಡಿ. ಏಕೆಂದರೆ ಅವು ಮಾಹಿತಿಗಳಿಗಿಂತ ತಪ್ಪು ಮಾಹಿತಿಗಳನ್ನೇ ಹರಡುತ್ತಿರುತ್ತವೆ ಮತ್ತು ಈ ಪ್ರವೃತ್ತಿಯು ಅಪಾಯಕರವಾಗಿದೆ. ಪ್ಯಾರಾಸಿಟಮಲ್ ಸೇವಿಸಲು ನಿಮಗೆ ಅವಕಾಶವಿರುತ್ತದೆ ಮತ್ತು ಯಥೇಚ್ಛ ನೀರನ್ನು ಸೇವಿಸಿ. ಉಳಿದಂತೆ ಹೆಚ್ಚೆಚ್ಚು ವಿಶ್ರಾಂತಿಯನ್ನು ಪಡೆಯಿರಿ.
ಈ ಕ್ರಮಗಳಿಂದ ಮುಂದಿನ ಆರೇಳು ದಿನಗಳಲ್ಲಿ ನಿಮಗೆ ಚೇತರಿಸಿಕೊಂಡ ಅನುಭವವಾಗಬೇಕು. ವೈರಸ್‌ನಿಂದ ತೀರ ಕಡಿಮೆ ಪ್ರಮಾಣದ ಜನರು ಬಾಧಿತರಾಗುತ್ತಾರೆ. ಹೀಗಾಗಿ ನೀವು ಹಾಸಿಗೆಯಲ್ಲಿ ಬಿದ್ದುಕೊಂಡಿದ್ದ ಅವಧಿಯಲ್ಲಿ ಯಾವುದೇ ಆತಂಕ,ಉದ್ವಿಗ್ನತೆಗೆ ಗುರಿಯಾಗಬೇಡಿ. ಏಕೆಂದರೆ ನೀವು ಖಂಡಿತವಾಗಿಯೂ ಚೇತರಿಸಿಕೊಳ್ಳುತ್ತೀರಿ. ನಿಮ್ಮ ಮನೆಯಲ್ಲಿಯ ಇತರರಿಗೆ ಸೋಂಕು ಹರಡದಿರುವ ಬಗ್ಗೆ ಮಾತ್ರ ನಿಮ್ಮ ಗಮನವಿರಲಿ.
ಅಪರೂಪದ ಆದರೆ ಸಾಧ್ಯತೆಯಿರುವ ಪ್ರಕರಣದಲ್ಲಿ ವೈರಸ್‌ನೊಂದಿಗೆ ಹೋರಾಡಲು ಕಷ್ಟಪಡುವವರ ಪೈಕಿ ನೀವೂ ಒಬ್ಬರಾಗಿದ್ದರೆ ನಿಮಗೆ ಉಸಿರಾಟದ ತೊಂದರೆ ಆರಂಭವಾಗಬಹುದು. ಹೀಗಾದಾಗ ನಿಮಗೆ ವೆಂಟಿಲೇಟರ್ ಅಗತ್ಯವಾಗಬಹು ದಾದ್ದರಿಂದ ಆಸ್ಪತ್ರೆಗೆ ದಾಖಲಾಗುವುದನ್ನು ನೀವು ಪರಿಗಣಿಸಬೇಕಾಗುತ್ತದೆ.
ನೀವು ಹಿರಿಯ ನಾಗರಿಕರಾಗಿದ್ದರೆ ಅಥವಾ ಮಧುಮೇಹಿ ಅಥವಾ ಹೃದ್ರೋಗಿಯಾಗಿದ್ದರೆ ಅಥವಾ ಸಾಮಾನ್ಯವಾಗಿ ಅನಾರೋಗ್ಯ ನಿಮ್ಮನ್ನು ಕಾಡುತ್ತಿದ್ದರೆ ಆಸ್ಪತ್ರೆಗೆ ಹೋಗುವ ಬಗ್ಗೆ ನೀವು ಶೀಘ್ರ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗುತ್ತದೆ. ಕೊರೋನವೈರಸ್ ಅತ್ಯಂತ ಸಾಂಕ್ರಾಮಿಕವಾದುದು ಎನ್ನುವುದು ಸದಾ ನಿಮ್ಮ ನೆನಪಿನಲ್ಲಿರಲಿ. ನಿಮ್ಮಿಂದ ಇತರರಿಗೆ ಸೋಂಕು ಹರಡದಂತೆ ರಕ್ಷಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುವುದು ಸಮಾಜದತ್ತ ಮತ್ತು ದೇಶದತ್ತ ನಿಮ್ಮ ಹೊಣೆಗಾರಿಕೆಯಾಗಿದೆ ಎನ್ನುವ ಬಗ್ಗೆ ನಿಮಗೆ ಅರಿವಿರಲಿ. ಉದಾಹರಣೆಗೆ ನೀವು ಮಾಸ್ಕ್ ಧರಿಸಿದರೆ ನಿಮ್ಮಿಂದ ಸೋಂಕು ಇತರರಿಗೆ ಹರಡದಂತೆ ಮಾಡುತ್ತದೆ. ಹೀಗಾಗಿ ನಿಮಗೆ ಅಸ್ವಸ್ಥತೆ ಕಾಣಿಸಿಕೊಂಡ ತಕ್ಷಣ ಮಾಸ್ಕ್ ಧರಿಸಲು ಆರಂಭಿಸಿ.
ಕೊನೆಯಲ್ಲಿ ನೀವು ಆತಂಕಗೊಳ್ಳಲು ಹೆಚ್ಚಿನ ಕಾರಣಗಳಿಲ್ಲ ಎನ್ನುವುದು ನಿಮ್ಮ ನೆನಪಿನಲ್ಲಿರಲಿ. ಮೊದಲನೆಯದು ನೀವು ಸೋಂಕಿಗೆ ಗುರಿಯಾಗುವ ಸಾಧ್ಯತೆ ಅತ್ಯಂತ ಕಡಿಮೆಯಿರುತ್ತದೆ. ಎರಡನೆಯದಾಗಿ ಸೋಂಕು ನಿಮಗೆ ತಗುಲಿದರೂ ನೀವು ಅದರ ವಿರುದ್ಧ ಅತ್ಯುತ್ತಮವಾಗಿ ಹೋರಾಡಬಲ್ಲಿರಿ ಮತ್ತು ಏಳೆಂಟು ದಿನಗಳಲ್ಲಿ ಚೇತರಿಸಿಕೊಳ್ಳುತ್ತೀರಿ. ಮೂರನೆಯದಾಗಿ ಯಾವುದೇ ಹೊಸ ಪ್ರಕರಣಗಳು ವರದಿಯಾಗದ ಮೂಲಕ ಕೊರೋನವೈರಸ್ ಮೊಟ್ಟಮೊದಲು ಕಾಣಿಸಿಕೊಂಡಿದ್ದ ಚೀನಾ ಕೊರೋನವೈರಸ್ ದೂರವಾಗುತ್ತದೆ ಎಂಬ ಆಶಾಭಾವನೆಯನ್ನು ಮೂಡಿಸಿದೆ.