ಕೊರೋನ ವೈರಸ್ ಹಿನ್ನೆಲೆ: ಬೆಳಗ್ಗೆ 6ರಿಂದ ಮಧ್ಯಾಹ್ನ 12ರವರೆಗೆ ಅಂಗಡಿ ಮುಂಗಟ್ಟು ತೆರೆಯಲು ಅವಕಾಶ
ದ.ಕ.ಜಿಲ್ಲೆಯಲ್ಲಿ ನಿಷೇಧಾಜ್ಞೆ ಮುಂದುವರಿಕೆ

ಮಂಗಳೂರು, ಮಾ.23: ಕೊರೋನ ವೈರಸ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯಲ್ಲಿ ಮಾ.31ರ ರಾತ್ರಿ 12 ಗಂಟೆಯವರೆಗೆ ಸೆ.144ನ್ನು ಮುಂದುವರಿಸಲಾಗಿದೆ. ಈ ಮಧ್ಯೆ ಮಂಗಳವಾರ ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಅಂಗಡಿ ಮುಂಗಟ್ಟುಗಳನ್ನು ತೆರೆಯಲು ಅವಕಾಶ ಕಲ್ಪಿಸಿ ದ.ಕ.ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಆದೇಶ ಹೊರಡಿಸಿದ್ದಾರೆ.
ಆವಶ್ಯಕ ಸೇವೆಗಳಾದ ಆಹಾರ, ಪಡಿತರ ಅಂಗಡಿ, ಹಾಲು, ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣು ಹಂಪಲಿನ ಮಾರುಕಟ್ಟೆ ಮತ್ತು ಸಗಟು-ಚಿಲ್ಲರೆ ವ್ಯಾಪಾರದ ಅಂಗಡಿಗಳನ್ನು ತೆರೆಯಬಹುದಾಗಿದೆ.
ಎಲ್ಲಾ ಓಲಾ, ಉಬರ್, ಟ್ಯಾಕ್ಸಿ, ರಿಕ್ಷಾ ಮತ್ತಿತರ ಬಾಡಿಗೆ ವಾಹನಗಳಲ್ಲಿ ಪ್ರಯಾಣಿಕರನ್ನು ಬಾಡಿಗೆಗೆ ಕರೆದೊಯ್ಯುವಂತಿಲ್ಲ. ಆದರೆ ಈ ವಾಹನಗಳಲ್ಲಿ ತುರ್ತು ಮತ್ತು ಆವಶ್ಯಕ ವಸ್ತುಗಳ ಸಾಗಾಟಕ್ಕೆ ವಿನಾಯಿತಿ ನೀಡಲಾಗಿದೆ.
ಆವಶ್ಯಕ ಸೇವೆಗಳು ಮತ್ತು ವಸ್ತುಗಳು, ಆಹಾರ, ವೈದ್ಯಕೀಯ ಉಪಕರಣಗಳು, ಔಷಧ, ಇಂಧನ ಹಾಗೂ ಕೃಷಿ ಉತ್ಪನ್ನಗಳ ಕಾರ್ಖಾನೆಗಳನ್ನು ಹೊರತುಪಡಿಸಿ ಉಳಿದ ಕೈಗಾರಿಕೆಗಳು/ಕಾರ್ಖಾನೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.







