'ಲಾಕ್ ಡೌನ್' ಹಿನ್ನೆಲೆಯಲ್ಲಿ ಶಾಹೀನ್ ಬಾಗ್ ಪ್ರತಿಭಟನಾ ಸ್ಥಳ ತೆರವುಗೊಳಿಸಿದ ಪೊಲೀಸರು
File Photo
ಹೊಸದಿಲ್ಲಿ: ದೇಶದ ವಿವಿಧೆಡೆ ಹರಡುತ್ತಿರುವ ಕೊರೋನ ವೈರಸ್ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿ ದೇಶಾದ್ಯಂತ 'ಲಾಕ್ ಡೌನ್' ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ದಿಲ್ಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ಕಳೆದ 101 ದಿನಗಳಿಂದ ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯ ಸ್ಥಳವನ್ನು ಕೊನೆಗೂ ಇಂದು ಬೆಳಿಗ್ಗೆ ತೆರವುಗೊಳಿಸಲಾಗಿದೆ.
ಬೆಳಿಗ್ಗೆ 7 ಗಂಟೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾ ನಿರತ ಮಹಿಳೆಯರಲ್ಲಿ ಸ್ಥಳ ಬಿಟ್ಟು ತೆರಳುವಂತೆ ವಿನಂತಿಸಿದರೂ ಯಾರೂ ಸ್ಪಂದಿಸದೇ ಇದ್ದಾಗ ಎಲ್ಲರನ್ನೂ ಅಲ್ಲಿಂದ 7.30ರ ಹೊತ್ತಿಗೆ ಬಲವಂತವಾಗಿ ತೆರವುಗೊಳಿಸಲಾಯಿತು. ಆರು ಮಂದಿ ಮಹಿಳೆಯರು ಹಾಗೂ ಮೂವರು ಪುರುಷರು ಸೇರಿದಂತೆ ಒಂಬತ್ತು ಮಂದಿಯನ್ನು ಈ ಸಂದರ್ಭ ಪೊಲೀಸರು ವಶಕ್ಕೆ ಪಡೆದುಕೊಂಡರು.
ಸ್ಥಳೀಯಾಡಳಿತವು ಪ್ರತಿಭಟನಾ ಸ್ಥಳವನ್ನು ಸ್ವಚ್ಛಗೊಳಿಸಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಿಎಎ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದ ಜಾಫ್ರಾಬಾದ್ ಹಾಗೂ ಟರ್ಕ್ಮೆನ್ ಗೇಟ್ ಪ್ರದೇಶಗಳಲ್ಲೂ ಪ್ರತಿಭಟನಾಕಾರರನ್ನು ತೆರವುಗೊಳಿಸಲಾಗಿದೆ.