ಕೊರೋನ ವೈರಸ್ ಗಂಭೀರತೆ ಅರಿಯುತ್ತಿರುವ ಉಡುಪಿ ಜಿಲ್ಲೆಯ ಜನತೆ

ಉಡುಪಿ, ಮಾ.26: ವಿಶ್ವದಾದ್ಯಂತ ನಡುಕವನ್ನೇ ಹುಟ್ಟಿಸಿರುವ ನೋವೆಲ್ ಕೊರೋನ (ಕೋವಿಡ್-19) ವೈರಸ್‌ನ ಗಂಭೀರತೆ ನಿಧಾನವಾಗಿಯಾದರೂ ಜಿಲ್ಲೆಯ ಜನತೆಯ ಅರಿವಿಗೆ ಬರುತ್ತಿದೆ. ಕಳೆದ ಒಂದು ವಾರದಿಂದ ಕೊರೋನ ಒಡ್ಡಿದ ಸವಾಲನ್ನು ಲಘುವಾಗಿ ಪರಿಗಣಿಸಿದ್ದ ಜನತೆ ಇದೀಗ ಹೆಚ್ಚು ಜವಾಬ್ದಾರಿಯಿಂದ ವರ್ತಿಸುವ ಸೂಚನೆ ಸಿಕ್ಕಿದೆ.
ಇಂದು ನಿತ್ಯಬಳಕೆಯ ವಸ್ತುಗಳು ಖರೀದಿ ಸೇರಿದಂತೆ ಜೀವನಾವಶ್ಯಕ ವಸ್ತುಗಳ ಖರೀದಿಗೆ ಜನರು ಸೇರಿದ್ದನ್ನು ಬಿಟ್ಟರೆ ನಿನ್ನೆ, ಮೊನ್ನೆಯಂತೆ ರಸ್ತೆಯಲ್ಲಿ ಅಡ್ಡಾಡುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿತ್ತು.
ಮೆಡಿಕಲ್ ಶಾಪ್, ತರಕಾರಿ, ಹಣ್ಣುಹಂಪಲು, ಜಿನಸಿನ ಅಂಗಡಿಯ ಎದುರು ಮಾತ್ರ ಜನರು ಕ್ಯೂನಲ್ಲಿ ನಿಂತಿರುವುದು ಕಂಡುಬಂತು. ಆದರೆ ಸುರಕ್ಷತಾ ಕ್ರಮಗಳನ್ನು ಪಾಲಿಸುವಲ್ಲಿ ಕೊರತೆ ಈಗಲೂ ಕಂಡುಬರುತಿದ್ದರೂ, ಕೆಲವರಿಗಾದರೂ ಈ ಬಗ್ಗೆ ಜಾಗೃತಿ ಮೂಡಿದ್ದು ಖಚಿತವಾಗಿತ್ತು. ಕ್ಯೂನಲ್ಲಿ ನಿಂತವರಲ್ಲಿ ಅಂತರ ಕಾಯ್ದುಕೊಳ್ಳುವಲ್ಲಿ, ಹೆಚ್ಚಿನವರು ಮಾಸ್ಕ್ ಹಾಕಿಕೊಳ್ಳುವಲ್ಲಿ ಜಾಗೃತಿ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಕಷ್ಟು ಕಾರು, ಸಣ್ಣ ವಾಹನ, ದ್ವಿಚಕ್ರ ವಾಹನ ಓಡುತಿದ್ದರೂ, ಪೊಲೀಸರು ಕುಂದಾಪುರ ಸೇರಿದಂತೆ ಜಿಲ್ಲೆಯ ಕೆಲವು ಕಡೆಗಳಲ್ಲಿ ತೋರಿಸಿದ ಲಾಠಿಯ ರುಚಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಬಳಿಕ ಜಾಲಿ ರೈಡ್ ಮಾಡುವವರ ಸಂಖ್ಯೆ ಕಡಿಮೆಯಾಗಿದೆ. ಕಾರುಗಳಲ್ಲಿ ತೆರಳುವವರೂ ಏಕಾಂಗಿಯಾಗಿದ್ದು, ಅಗತ್ಯ ಕೆಲಸಗಳಿಗೆ ತೆರಳುವವರಂತೆ ಕಂಡುಬಂದರು. ಅದೇ ರೀತಿ ಜನ ಗುಂಪು ಸೇರುವ ದೃಶ್ಯ ಇಂದು ಅಪರಾಹ್ನದವರೆಗೆ ಏಲ್ಲೂ ಕಂಡುಬರಲಿಲ್ಲ.
ಮಲ್ಪೆ ಬಂದರಿನಲ್ಲಿ ಪ್ರವೇಶದ್ವಾರಕ್ಕೆ ಬೀಗ ಹಾಕಲಾಗಿತ್ತು. ಈಗಾಗಲೇ ಆಳಸಮುದ್ರ ಮೀನುಗಾರಿಕೆಯಿಂದ ಮರಳಿರುವ ಬೋಟುಗಳಲ್ಲಿ 100ಕ್ಕೂ ಅಧಿಕ ಬೋಟುಗಳನ್ನು ಖಾಲಿ ಮಾಡಲು ಇನ್ನೂ ಬಾಕಿ ಇದೆ. ಜಿಲ್ಲಾಡಳಿತದ ಬಿಗುವಾದ ಆದೇಶದಿಂದಾಗಿ ಈ ಮೀನುಗಳನ್ನು ಏನು ಮಾಡಬೇಕೆಂದು ತಮಗೆ ತೋಚುತ್ತಿಲ್ಲ ಎಂದು ಮೀನುಗಾರರು ಅಳಲು ತೊಡಿಕೊಂಡರು. ಅದೇ ರೀತಿ ಇನ್ನೂ 100ರಷ್ಟು ಆಳಸಮುದ್ರ ಬೋಟುಗಳು ಬರಲು ಬಾಕಿ ಇದ್ದು, ಅವುಗಳು ಹಿಡಿದು ತಂದ ಮೀನುಗಳನ್ನು ಏನು ಮಾಡಬೇಕೆಂದು ಅವರು ಚಿಂತಿಸುತಿದ್ದಾರೆ.












