ಮಸೀದಿಗಳಲ್ಲಿ ನಮಾಝ್ ಗೆ ನಿರ್ಬಂಧ: ಸರಕಾರದ ಆದೇಶ ಪಾಲಿಸಲು ಎ.ಪಿ ಉಸ್ತಾದ್ ಕರೆ
ಕೊರೋನ ವೈರಸ್ ಹಿನ್ನೆಲೆ

ಕಲ್ಲಿಕೋಟೆ, ಮಾ.26: ಕೊರೋನ ವೈರಸ್ ತಡೆಗಟ್ಟುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರಕಾರ ಮುಂಜಾಗ್ರತಾ ಕ್ರಮವಾಗಿ ಮಸೀದಿಗಳಲ್ಲಿ ನಮಾಝ್ ನಿರ್ವಹಿಸದಂತೆ ಆದೇಶಿಸಿದ್ದು, ಈ ಕ್ರಮವನ್ನು ನಾವೆಲ್ಲರೂ ಪಾಲಿಸಬೇಕು ಎಂದು ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ಕರೆ ನೀಡಿದ್ದಾರೆ.
ಲೋಕಕ್ಕೆ ದೊಡ್ಡ ಆಪತ್ತು ಬಂದೆರಗಿದೆ. ಭಾರತ, ಅರಬ್ ರಾಷ್ಟ್ರಗಳು ಮಾತ್ರವಲ್ಲದೇ ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿ ಮಾರಕ ಕೊರೋನ ಆರ್ಭಟಿಸುತ್ತಿದೆ. ಇದರಿಂದ ರಕ್ಷೆ ಹೊಂದುವ ಮುಖ್ಯ ದಾರಿ ಜನರು ಒಗ್ಗೂಡದಿರುವುದಾಗಿದೆ. ಹೀಗಾಗಿಯೇ ಪವಿತ್ರ ಮಕ್ಕಾ ಹಾಗೂ ಮದೀನ ಮಸ್ಜಿದ್ ಸಹಿತ ವಿಶ್ವದ ಹಲವು ಮಸೀದಿಗಳಿಗೆ ಜನರಿಗೆ ನಿರ್ಬಂಧ ವಿಧಿಸಲಾಗಿದೆ. ಜನಸಂದಣಿಯಿರುವ ಕಡೆ ರೋಗ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದು, ಇದನ್ನು ಎಲ್ಲರೂ ಪಾಲಿಸುವ ಅಗತ್ಯವಿದೆ. ಹೀಗಾಗಿ ನಾವು ಕೂಡಾ ಅದೇ ಹಾದಿಯಲ್ಲಿ ಸಾಗಬೇಕಿದೆ. ಪ್ರತ್ಯೇಕವಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಮುಂಜಾಗ್ರತಾ ಕ್ರಮವಾಗಿ ಜುಮಾ ನಮಾಝ್ ಮಾಡಬಾರದೆಂದು ಆದೇಶಿಸಿದ್ದರಿಂದ ಮಸೀದಿಯಲ್ಲಿ ಒಗ್ಗೂಡಿ ಜುಮಾ ನಮಾಝ್ ಮಾಡುವುದು ಸರಿಯಲ್ಲ. ಕೊರೋನ ವ್ಯಾಪಿಸದಂತೆ ಸರಕಾರ ಈ ಕ್ರಮ ಕೈಗೊಂಡಿದ್ದು, ಹೀಗಾಗಿ ನಾವು ಅದನ್ನು ಪಾಲಿಸಬೇಕಿದೆ ಎಂದು ಎ.ಪಿ ಉಸ್ತಾದ್ ಮನವಿ ಮಾಡಿದ್ದಾರೆ.





