ಕ್ವಾರಂಟೈನ್ ನಲ್ಲಿರದೆ ಮೀನು ಹಿಡಿಯಲು ಹೋಗಿದ್ದ ವಕೀಲನ ವಿರುದ್ಧ ಕೇಸ್
ಶಿವಮೊಗ್ಗ, ಮಾ.27: ಹದಿನಾಲ್ಕು ದಿನ ಮನೆಯಲ್ಲಿ ನಿಗಾದಲ್ಲಿರುವಂತೆ ಸೂಚಿಸಿದ್ದರೂ ಅದನ್ನು ಉಲ್ಲಂಘಿಸಿ, ಮೀನು ಹಿಡಿಯಲು ಹೋಗಿದ್ದ ವಕೀಲರೊಬ್ಬರ ವಿರುದ್ಧ ಸೊರಬ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.
ಕೊರೋನ ಬಾಧಿತ ಪ್ರದೇಶದಿಂದ ಬಂದಿದ್ದ ವಕೀಲ ಪ್ರಕಾಶ್ ನಾಯ್ಕ ಮನೆ ಬಿಟ್ಟು ಹೊರಬಾರದಂತೆ(ಹೋಂ ಕ್ವಾರಂಟೈನ್) ಸೂಚಿಸಲಾಗಿತ್ತು. ಆದರೆ ಇದನ್ನು ನಿರ್ಲಕ್ಷಿಸಿ ಇತರ 11 ಮಂದಿಯೊಂದಿಗೆ ಸೊರಬ ತಾಲೂಕು ದೇವಕಾತಿ ಕೊಪ್ಪದ ಬಳಿ ಕೆರೆಗೆ ಮೀನು ಹಿಡಿಯಲು ಹೋಗಿದ್ದರೆನ್ನಲಾಗಿದೆ. ಈ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತೆರಳಿದ ಪೊಲೀಸರ ಕರ್ತವ್ಯಕ್ಕೂ ಇವರು ಅಡ್ಡಿಪಡಿಸಿದ್ದಾರೆ ಎಂದು ಪೊಲೀಸ್ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಲಾಕ್’ಡೌನ್ ನಿಯಮ ಮತ್ತು ಜಿಲ್ಲಾಧಿಕಾರಿ ಅವರು ವಿಧಿಸಿರುವ ಸೆಕ್ಷನ್ 144ರ ನಿಷೇಧಾಜ್ಞೆ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಪ್ರಕಾಶ್ ನಾಯ್ಕ ಮತ್ತು ಇತರರ ವಿರುದ್ಧ ಐಪಿಸಿ ಸೆಕ್ಷನ್ 188, 353, 269, 271, 149ರ ಅನ್ವಯ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





