ಕ್ವಾರಂಟೈನ್ ನಿಯಮ ಉಲ್ಲಂಘಿಸಿದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲು
ಚಿಕ್ಕಮಗಳೂರು, ಮಾ.27: ವಿದೇಶದಿಂದ ನಗರಕ್ಕೆ ಮರಳಿದ ವ್ಯಕ್ತಿಗೆ ಆರೋಗ್ಯ ಇಲಾಖೆ ಕ್ವಾರಂಟೈನ್‍ನಲ್ಲಿ ಇರುವಂತೆ ಸೂಚಿಸಿದ್ದರೂ ನಿಯಮ ಉಲ್ಲಂಘಿಸಿ ಸಾರ್ವಜನಿಕ ಪ್ರದೇಶದಲ್ಲಿ ತಿರುಗಾಡುತ್ತಿದ್ದ ಆರೋಪದ ಮೇರೆಗೆ ಅವರ ಮೇಲೆ ಪ್ರಕರಣ ದಾಖಲಿಸಿದ್ದಲ್ಲದೇ ನಗರದ ಮಧುವನ ಲೇಔಟ್‍ನಲ್ಲಿರುವ ಕ್ವಾರೈಂಟೈನ್ ಕೇರ್ ಸೆಂಟರ್ ಗೆ ದಾಖಲಿಸಿರುವ ಘಟನೆ ಗುರುವಾರ ಸಂಜೆ ವರದಿಯಾಗಿದೆ.
ಈ ವ್ಯಕ್ತಿ ಇತ್ತೀಚೆಗೆ ಸೌದಿ ಅರೇಬಿಯಾ ದೇಶದ ದಮಾಮ್ ನಿಂದ ಚಿಕ್ಕಮಗಳೂರು ನಗರಕ್ಕೆ ಹಿಂದಿರುಗಿದ್ದರು. ಅವರ ಮೇಲೆ ನಿಗಾ ವಹಿಸಿದ್ದ ಆರೋಗ್ಯ ಇಲಾಖೆ ಎ.3ರವರೆಗೆ ಮನೆಯಿಂದ ಹೊರ ಬಾರದಂತೆ ಸೂಚನೆ ನೀಡಿದ್ದರೆಂದು ತಿಳಿದುಬಂದಿದ್ದು, ಆರೋಗ್ಯ ಇಲಾಖೆ ಸೂಚನೆಯನ್ನು ಮೀರಿ ಸಾರ್ವಜನಿಕ ಸ್ಥಳದಲ್ಲಿ ಓಡಾಡುತ್ತಿರುವ ಬಗ್ಗೆ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ವೈದ್ಯಾಧಿಕಾರಿ ಡಾ.ಪ್ರತ್ಯಕ್ಷ ಭೈರವ್ ದೂರು ನೀಡಿದ್ದರು. ಇದರ ಅನ್ವಯ ಅವರ ಮೇಲೆ ಪ್ರಕರಣ ದಾಖಲಿಸಲಾಗಿದ್ದು, ಇದೀಗ ಅವರನ್ನು ಮಧುವನ ಲೇಔಟ್‍ನಲ್ಲಿರುವ ಕೊರೋನ ನಿಗಾ ಘಟಕಕ್ಕೆ ದಾಖಲಿಸಲಾಗಿದೆ ಎಂದು ಎಸ್ಪಿ ಹರೀಶ್ ಪಾಂಡೆ ತಿಳಿಸಿದ್ದಾರೆ.





