ಕೊರೋನ ವೈರಸ್ ಕುರಿತು ಕೋಮು ಪ್ರಚೋದಕ ಪೋಸ್ಟ್: ವಕೀಲ ರಾಜಾರಾಮ್ ವಿರುದ್ಧ ಬಂಟ್ವಾಳ ಠಾಣೆಯಲ್ಲಿ ಪ್ರಕರಣ ದಾಖಲು

ಸಾಂದರ್ಭಿಕ ಚಿತ್ರ
ಬಂಟ್ವಾಳ, ಮಾ. 27: ಕೊರೋನ ವೈರಸ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದಕ ಬರಹ ಹಾಕಿ ಸಮಾಜದ ಅಶಾಂತಿಗೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ಸಂವಿಧಾನ ಸಂರಕ್ಷಣಾ ಸಮಿತಿ ಬಂಟ್ವಾಳ ತಾಲೂಕು ಸಮಿತಿಯಿಂದ ವಕೀಲ ರಾಜಾರಾಮ್ ನಾಯಕ್ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಕೀಲ ರಾಜಾರಾಮ್ ನಾಯಕ್ ತನ್ನ ಫೇಸ್ ಬುಕ್ ಪುಟದಲ್ಲಿ ಪವಿತ್ರ ಸ್ಥಳ ಮಕ್ಕಾ, ಅಲ್ಲಾಹ್ ಹಾಗೂ ಏಸುವಿನ ಬಗ್ಗೆ ಅವಹೇಳನಕಾರಿ ಹಾಗೂ ಕೋಮು ಪ್ರಚೋದನಕಾರಿ ಬರಹ ಹಾಕಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
"ಅಲ್ಲಾಹನ ದುಬೈಯಿಂದ ಹಾಗೂ ಏಸು ದೇಶಗಳಿಂದ ಬಂದ ಹರಾಮಿ ಜನರಿಂದಲೇ ಪವಿತ್ರ ಭಾರತದಲ್ಲಿ ಕರೋನ ವೈರಸ್ ಸೊಂಕು ಹರಡಿದ್ದು, ಒದ್ದು ಓಡಿಸಬೇಕು ಹಾಗೂ 33 ಕೋಟಿ ದೇವರುಗಳು ಕೊರೋನ ಬರದಂತೆ ತಡೆದಿದ್ದರು. 3000 ಜನ ಹಜ್ ಹೋಗಿದ್ದೋರು ಅಲ್ಲಾಹನ ಪ್ರಸಾದ ಅಂತ ತಗಂಡ್ ಬಂದ್ರು" ಎಂದು ಫೇಸ್ ಬುಕ್ ನಲ್ಲಿ ರಾಜಾರಾಮ್ ನಾಯಕ್ ಪೋಸ್ಟ್ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದು ಎರಡು ಧರ್ಮಗಳ ನಡುವೆ ಕೋಮು ವೈಷಮ್ಯ ಹರಡಿ ಕೋಮು ಗಲಭೆಗೆ ಮಾಡಿರುವ ಹುನ್ನಾರವಾಗಿದ್ದು, ಆತನನ್ನು ಬಂಧಿಸಿ ಕಾನೂನು ಕ್ರಮ ಜರಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಲಾಗಿದೆ.
ದೂರು ನೀಡಲು ತೆರಳಿದ್ದ ನಿಯೋಗದಲ್ಲಿ ಸಂವಿಧಾನ ಸಂರಕ್ಷಣಾ ಸಮಿತಿ ಬಂಟ್ವಾಳ ಇದರ ಉಪಾಧ್ಯಕ್ಷ ಟಿ.ಕೆ. ಶರೀಫ್ ತುಂಬೆ, ಕೆ.ಎಚ್.ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿ ಮುನೀಶ್ ಅಲಿ, ಜೊತೆ ಕಾರ್ಯದರ್ಶಿ ಇರ್ಫಾನ್ ತುಂಬೆ, ಸದಸ್ಯ ಶಾಹುಲ್ ಹಮೀದ್ ಎಸ್.ಎಚ್. ಉಪಸ್ಥಿತರಿದ್ದರು.







