ಪಡಿತರ ಚೀಟಿದಾರರಿಗೆ ಸೂಚನೆ
ಉಡುಪಿ, ಮಾ.27: ಕೋವಿಡ್-19 ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಎಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಏಕಕಾಲದಲ್ಲಿ ನೀಡಲು ಅವಕಾಶ ಕಲ್ಪಿಸಲಾಗಿದೆ. ಆದರೆ ತಮ್ಮ ನಿಗದಿತ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಪಡೆಯಲು ಬರುವ ಪಡಿತರ ಚೀಟಿದಾರರು ಪಡಿತರ ಚೀಟಿಯಲ್ಲಿ ಇರುವ ಯಾವುದೇ ಒಬ್ಬ ಸದಸ್ಯರ ಆಧಾರ್ ನಂಬರ್‌ಗೆ ನೊಂದಾಯಿತವಾಗಿರುವ ಮೊಬೈಲ್‌ಗೆ ಬರುವ ಓಟಿಪಿ ಮೂಲಕ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಆದುದರಿಂದ ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಬರುವ ಎಲ್ಲಾ ಪಡಿತರ ಚೀಟಿದಾರರು, ಬರುವಾಗ ಕಡ್ಡಾಯವಾಗಿ ಆಧಾರ್ ನೊಂದಾಯಿತ ವಾಗಿರುವ ಮೊಬೈಲ್‌ನ್ನು ತಂದು ಓಟಿಪಿ ಮೂಲಕ ಪಡಿತರ ಪಡೆಯುವಂತೆ ತಿಳಿಸಲಾಗಿದೆ.
ಒಂದು ವೇಳೆ ಪಡಿತರ ಚೀಟಿಯಲ್ಲಿನ ಯಾವುದೇ ಸದಸ್ಯರ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ನೊಂದಾಯಿತವಾಗಿಲ್ಲದಿದ್ದಲ್ಲಿ ಅವರ ಬಳಿ ಲಭ್ಯವಿರುವ ಮೊಬೈಲ್ ಸಂಖ್ಯೆ ನಮೂದಿಸಿ ಓಟಿಪಿ ಮೂಲಕ ಪಡಿತರ ಪಡೆಯಲು ಅವಕಾಶವಿರುತ್ತದೆ.
ಅದೇ ರೀತಿ ನ್ಯಾಯಬೆಲೆ ಅಂಗಡಿಗಳಲ್ಲಿ ಈ ಪಡಿತರ ಎಪ್ರಿಲ್ ತಿಂಗಳ ಎಲ್ಲಾ ದಿನಗಳಲ್ಲಿ ಲಭ್ಯವಿರುವ ಕಾರಣ, ಗುಂಪು ಗೂಡದೇ ಪಡಿತರ ಪಡೆಯುವಾಗ ಪಡಿತರ ಚೀಟಿದಾರರ ನಡುವೆ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾಸ್ಕ್‌ಗಳನ್ನು ಧರಿಸಿಕೊಂಡು ಸಾನಿಟೈಸರ್ ಗಳನ್ನು ಉಪಯೋಗಿಸಿ ಪಡಿತರ ಪಡೆದುಕೊಂಡು ನ್ಯಾಯಬೆಲೆ ಅಂಗಡಿ ಸಿಬ್ಬಂದಿಯೊಂದಿಗೆ ಸಹಕರಿಸುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದ್ದಾರೆ.







