ಭಟ್ಕಳದಲ್ಲಿ ಮೆಡಿಕಲ್ ಎಮರ್ಜೆನ್ಸಿ ಘೋಷಣೆ: ಅಗತ್ಯ ವಸ್ತುಗಳು ಮನೆಬಾಗಿಲಿಗೆ-ಸಹಾಯಕ ಆಯುಕ್ತ ಭರತ್

ಭಟ್ಕಳ: ಇಂದಿನಿಂದ ಮುಂದಿನ ಆದೇಶದ ವರೆಗೆ ಸಂಪೂರ್ಣ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಿದ್ದು ಔಷಧ, ಹಣ್ಣು, ತರಕಾರಿ, ಅಗತ್ಯ ಸಾಮಗ್ರಿಗಳನ್ನು ಪ್ರತಿ ಮನೆಗೆ ಅಗತ್ಯಕ್ಕೆ ತಕ್ಕಂತೆ ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಹಾಯಕ ಆಯುಕ್ತ ಭರತ್ ಎಸ್. ಅವರು ಹೇಳಿದ್ದಾರೆ.
ಅವರು ಶುಕ್ರವಾರ ಸಹಾಯಕ ಆಯುಕ್ತರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿದ್ದರು.
ಭಟ್ಕಳದಲ್ಲಿ ಅಗತ್ಯ ವಸ್ತುಗಳ ಸರಬರಾಜು ಮಾಡಲು ಸ್ವಯಂ ಸೇವಕರನ್ನು ನೇಮಕ ಮಾಡಿಕೊಂಡಿದ್ದು ಕೆಲವೊಂದು ತೊಡಕುಗಳು ಕಂಡು ಬಂದ ಮೇರೆಗೆ ಪ್ರತಿಯೋರ್ವರ ಆಧಾರ್ ಕಾರ್ಡ ಹಾಗೂ ಪೋಟೋ ಪಡೆದು ಪರಿಶೀಲಿಸಿದ ನಂತರವಷ್ಟೇ ಅವರಿಗೆ ಸೂಕ್ತ ಪಾಸ್ ನೀಡಲು ಕ್ರಮ ಕೈಗೊಳ್ಳಲಾಗುವುದು. ಯಾರೂ ಕೂಡಾ ಮನೆಯಿಂದ ಹೊರಕ್ಕೆ ಬರುವ ಅಗತ್ಯವಿಲ್ಲ. ಮನೆ ಮನೆಗೆ ಅಗತ್ಯ ವಸ್ತುಗಳನ್ನು ಪೂರೈಸಲಾಗುವುದು. ಯಾವುದೇ ತುರ್ತು ಸಂದರ್ಭಗಳಿದ್ದರೆ ದಿನ 24 ಗಂಟೆ ಕಾರ್ಯಾಚರಿಸುವ 08385226422 ನಂಬರಿಗೆ ಸಂಪರ್ಕ ಮಾಡಬಹುದು. ಯಾವುದೇ ವ್ಯಕ್ತಿಗಳು ತಮ್ಮ ವಾಹನವನ್ನು ತುರ್ತು ಅಗತ್ಯತೆಗಾಗಿ ಕೊಡುವುದಿದ್ದಲ್ಲಿ ಅದನ್ನು ತಾಲೂಕಾ ಪಂಚಾಯತ್ ಆವರಣದಲ್ಲಿಟ್ಟು ಜನತೆಯ ತುರ್ತು ಬಳಕೆಗೆ ಉಪಯೋಗಿಸಲಾಗುವುದು ಎಂದ ಅವರು ಅಂತಹ ವಾಹನ ನೀಡುವವರಿದ್ದಲ್ಲಿ ಸಂಪರ್ಕಿಸಬಹುದು ಎಂದೂ ಹೇಳಿದರು.
ಸಿಬ್ಬಂದಿಗಳಿಗೆ ಹಾಗೂ ಕರೋನಾ ಸಂಬಂಧ ಕಾರ್ಯ ನಿರ್ವಹಿಸುವವರಿಗೆ ಅಗತ್ಯದ ಆಹಾರ ಪೂರೈಕೆಗೆ ಸಂಬಂಧ ಪಟ್ಟಂತೆ ಸಾಜಿದ್ ಅಹಮ್ಮದ್ ಮುಲ್ಲಾ ಅವರು ನೋಡಲ್ ಅಧಿಕಾರಿಯಾಗಿರುತ್ತಾರೆ. ಆರೋಗ್ಯಕ್ಕೆ ಸಂಬಂಧ ಪಟ್ಟಂತೆ ಡಾ. ಶರದ್ ನಾಯಕ ನೋಡಲ್ ಅಧಿಕಾರಿಯಾಗಿರುತ್ತಾರೆ. ಕಾನೂನು ಸುವ್ಯವಸ್ಥೆಗೆ ಸಂಬಂಧ ಪಟ್ಟಂತೆ ಡಿ.ವೈ.ಎಸ್.ಪಿ. ಗೌತಮ್ ಅವರು ನೋಡಲ್ ಅಧಿಕಾರಿಯಾಗಿರುತ್ತಾರೆ ಎಂದೂ ಅವರು ಹೇಳಿದರು.
ಯಾವುದೇ ರೀತಿಯ ಆರೋಗ್ಯ ಸಮಸ್ಯೆ ಇರುವವರು ತಹಸೀಲ್ದಾರ್ ಕಚೇರಿಯ ಹೆಲ್ಪ್‍ಲೈನ್ ನಂಬರವನ್ನು ಸಂಪರ್ಕಿಸಿದಲ್ಲಿ ಅವರಿಗೆ ಅಗತ್ಯದ ಮೆಡಿಸಿನ್ ಹಾಗೂ ವೈದ್ಯಕೀಯ ಸೌಲಭ್ಯ ನೀಡಲಾಗುವುದು. ತುರ್ತು ಸಂದರ್ಭದಲ್ಲಿ ಅಂಬುಲೆನ್ಸ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದ ಅವರು ಯಾರೂ ಕೂಡಾ ಮನೆಯಿಂದ ಹೊರಕ್ಕೆ ಬರದಂತೆ ವಿನಂತಿ ಮಾಡಿದರು.
ನಾಲ್ಕಕ್ಕೇರಿದ ಕೊರೋನಾ ಸೋಂಕಿತರ ಸಂಖ್ಯೆ; ಭಟ್ಕಳದಲ್ಲಿ ಮತ್ತೊಂದು ಪ್ರಕರಣವು ಪತ್ತೆಯಾಗಿದ್ದು ಆತನು ಈ ಮೊದಲು ಹೊರದೇಶದಿಂದ ಬಂದು ಭಟ್ಕಳ ಸರಕಾರಿ ಆಸ್ಪತ್ರೆಯಲ್ಲಿ ನಿಗಾದಲ್ಲಿ ಇದ್ದ ವ್ಯಕ್ತಿಯಾಗಿದ್ದಾನೆ. ಈತನಿಗೆ ಕೊರೊನಾ ಇರುವುದು ದೃಢವಾಗುತ್ತಿದ್ದಂತೆಯೇ ಭಟ್ಕಳದಲ್ಲಿ ಪತ್ತೆಯಾದ ಮೂರನೇ ಪ್ರಕರಣವಾಗಿದ್ದು ಇನ್ನೊಂದು ಪ್ರಕರಣ ಮಂಗಳೂರಿನಲ್ಲಿ ಪತ್ತೆಯಾಗಿತ್ತು ಎನ್ನುವುದನ್ನು ಸ್ಮರಿಸಬಹುದು. ಈಗಾಗಲೇ ಕೊರೊನಾ ಸೋಂಕಿತರನ್ನು ಪರೀಕ್ಷೆ ಮಾಡಿದ ವೈದ್ಯರುಗಳ ಪರೀಕ್ಷಾ ವರದಿ ಬಂದಿದ್ದು ಅವುಗಳೆರಡೂ ಕೂಡಾ ನೆಗೆಟಿವ್ ಬಂದಿದ್ದರಿಂದ ವೈದ್ಯಕೀಯ ಸಿಬ್ಬಂದಿಗಳು ನಿಟ್ಟುಸಿರು ಬಿಡುವಂತಾಗಿದೆ.
ಸರಕಾರಿ ಆಸ್ಪತ್ರೆಯನ್ನು ಸಂಪೂರ್ಣ ಕೊರೊನಾ ಪೀಡಿತರಿಗಾಗಿಯೇ ಮೀಸಲಿಟ್ಟಿದ್ದರಿಂದ ಸಣ್ಣ ಪುಟ್ಟ ಅಗತ್ಯತೆಗಾಗಿ ಶಿರಾಲಿಯ ಸರಕಾರಿ ಆಸ್ಪತ್ರೆಯನ್ನು ಜನರು ಆವಲಂಬಿಸಬೇಕಾಗಿ ಬಂದಿದೆ. ಈ ಸಂದರ್ಭದಲ್ಲಿ ನೋಡಲ್ ಅಧಿಕಾರಿಗಳಾದ ಸಾಜಿದ್ ಆಹ್ಮದ್ ಮುಲ್ಲಾ, ಶರದ್ ನಾಯ್ಕ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಅಶೋಕ ಕುಮಾರ್, ಡಿ.ವೈ ಎಸ್.ಪಿ ಗೌತಮ್ ಉತಪಸ್ತಿತರಿದ್ದರು.







