ಲಾಕ್‍ಡೌನ್ ಎಫೆಕ್ಟ್ : 200 ಕಿಲೋಮೀಟರ್ ಕಾಲ್ನಡಿಗೆ ಬಳಿಕ ರಸ್ತೆಯಲ್ಲೇ ಮೃತಪಟ್ಟ ಕಾರ್ಮಿಕ

ಆಗ್ರಾ : ಲಾಕ್‍ಡೌನ್ ಪರಿಣಾಮವಾಗಿ 300 ಕಿಲೋಮೀಟರ್ ದೂರದ ಹುಟ್ಟೂರಿಗೆ ಕಾಲ್ನಡಿಗೆಯಲ್ಲಿ ಹೊರಟ ಹೋಟೆಲ್ ಕಾರ್ಮಿಕನೊಬ್ಬ 200 ಕಿಲೋಮೀಟರ್ ದೂರ ಕ್ರಮಿಸಿದ ಬಳಿಕ ದೆಹಲಿ- ಆಗ್ರಾ ಹೆದ್ದಾರಿಯಲ್ಲಿ ಮೃತಪಟ್ಟ ಧಾರುಣ ಘಟನೆ ವರದಿಯಾಗಿದೆ.
ಮಧ್ಯಪ್ರದೇಶದ ಮೊರೇನಾ ಜಿಲ್ಲೆಯಲ್ಲಿರುವ ತನ್ನ ಮನೆ ಸೇರಿಕೊಳ್ಳಲು ರಣವೀರ್ ಸಿಂಗ್ ಇನ್ನೂ 100 ಕಿಲೋಮೀಟರ್ ಕ್ರಮಿಸಬೇಕಿತ್ತು. ರಣವೀರ್ ಮೃತದೇಹವನ್ನು ಅಟಾಪ್ಸಿ ಪರೀಕ್ಷೆಗೆ ಕಳುಹಿಸಲಾಗಿದ್ದು, ಸೂಕ್ತ ವಿಧಿವಿಧಾನ ಪೂರೈಸಿದ ಬಳಿಕ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಅಧಿಕೃತ ಮೂಲಗಳು ಹೇಳಿವೆ.
ಅನತಿ ದೂರದಲ್ಲೇ ಕುಸಿದು ಬೀಳುವ ಮುನ್ನ ರಣವೀರ್ ಸಿಂಗ್ ಎದೆನೋವು ಆಗುತ್ತಿದೆ ಎಂದು ಹೇಳಿದ್ದಾಗಿ ಆತನ ಜತೆಗೆ ಕಾಲ್ನಡಿಗೆಯಲ್ಲಿದ್ದ ಇಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ದೇಶಾದ್ಯಂತ ದಿಢೀರನೇ ಲಾಕ್‍ಡೌನ್ ಘೋಷಿಸಿ ಎಲ್ಲ ಮಳಿಗೆ ಹಾಗೂ ಕಚೇರಿಗಳನ್ನು ಮುಚ್ಚಲು ಆದೇಶಿಸಿದ ಹಿನ್ನೆಲೆಯಲ್ಲಿ ಹುಟ್ಟೂರಿಗೆ ಕಾಲ್ನಡಿಗೆಯಲ್ಲಿ ತೆರಳಲು ಸಿಂಗ್ ನಿರ್ಧರಿಸಿದ್ದ. ಕೇವಲ ಪಾರ್ಸೆಲ್ ಸೇವೆಗಾಗಿ ಹೋಟೆಲ್‍ಗಳು ತೆರೆದಿರಲು ಅವಕಾಶ ನೀಡಲಾಗಿತ್ತು. ಆದರೆ ಪೊಲೀಸರು ಉಪಹಾರಗೃಹಗಳನ್ನು ತೆರೆಯಲು ಅನುಮತಿ ನೀಡಿರಲಿಲ್ಲ ಎನ್ನಲಾಗಿದೆ. ದೆಹಲಿಯ ತುಘಲಕಾಬಾದ್‍ನಲ್ಲಿ ಸಿಂಗ್ ಕೆಲಸ ಮಾಡುತ್ತಿದ್ದ ರೆಸ್ಟೋರೆಂಟ್ ಮುಚ್ಚಲಾಗಿತ್ತು ಎಂದು ಆಗ್ರಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಬ್ಲೂ ಕುಮಾರ್ ಹೇಳಿದ್ದಾರೆ.
ದೆಹಲಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿರುವ ಸಾವಿರಾರು ಮಂದಿ ವಲಸೆ ಕಾರ್ಮಿಕರು ಮನೆಗೆ ತೆರಳಲು ಹರಸಾಹಸಪಡುತ್ತಿದ್ದ ಹಿನ್ನೆಲೆಯಲ್ಲಿ ರಣವೀರ್ ಸಿಂಗ್ ಕೂಡಾ ಮನೆಗೆ ಹೋಗಲು ನಿರ್ಧರಿಸಿದ್ದರು. ಸಾರ್ವಜನಿಕ ಸಾರಿಗೆ ಸ್ಥಗಿತಗೊಂಡ ಹಿನ್ನೆಲೆಯಲ್ಲಿ 300 ಕಿಲೋಮೀಟರ್ ದೂರದ ಊರಿಗೆ ನಡೆದುಕೊಂಡೇ ಹೋಗುವ ನಿರ್ಧಾರಕ್ಕೆ ಬಂದಿದ್ದರು.
ಇತರ ಇಬ್ಬರ ಜತೆಗೆ ರಣವೀರ್ ದೆಹಲಿಯಿಂದ ಮಧ್ಯಪ್ರದೇಶದ ಮೊರೇನಾ ಜಿಲ್ಲೆಯ ತಮ್ಮ ಸ್ವಗ್ರಾಮಕ್ಕೆ ಕಾಲ್ನಡಿಗೆ ಆರಂಭಿಸಿದ್ದರು. ಶನಿವಾರ ಮುಂಜಾನೆ ಆಗ್ರಾ ತಲುಪಿದಾಗ ಎದೆನೋವು ಕಾಣಿಸಿಕೊಂಡಿತು. ಎಲ್ಲ ಮೂರು ಮಂದಿಯೂ ಹೊರವಲಯದಲ್ಲಿ ನಿಂತರು ಆದರೆ ರಣವೀರ್ ಕುಸಿದು ಬಿದ್ದು ಮೃತಪಟ್ಟ ಎಂದು ಪೊಲೀಸರು ವಿವರಿಸಿದ್ದಾರೆ.
ಸ್ಥಳೀಯ ಅಂಗಡಿ ಮಾಲಕರೊಬ್ಬರು ಇವರ ನೆರವಿಗೆ ಧಾವಿಸಿ ರಣವೀರ್ ವಿಶ್ರಾಂತಿ ಪಡೆಯಲು ಅವಕಾಶ ನೀಡಿ ಚಹಾ ಹಾಗೂ ಬಿಸ್ಕತ್ ನೀಡಿದ್ದರು. ಪೊಲೀಸರು ಆಗಮಿಸುವ ವೇಳೆಗೆ ರಣವೀರ್ ಮೃತಪಟ್ಟಿದ್ದ.