ಕೊರೋನ ವೈರಸ್ : ದ.ಕ.ಜಿಲ್ಲೆಯಲ್ಲಿ ಈವರೆಗೆ 161 ಮಂದಿಯ ವರದಿ ನೆಗೆಟಿವ್

ಮಂಗಳೂರು, ಮಾ. 29: ದ.ಕ.ಜಿಲ್ಲೆಯಲ್ಲಿ ಈವರೆಗೆ 182 ಮಂದಿಯ ಗಂಟಲು ದ್ರವವನ್ನು ವೈದ್ಯಕೀಯ ತಪಾಸಣೆಗಾಗಿ ಕಳುಹಿಸಲಾಗಿತ್ತು, ಆ ಪೈಕಿ 7 ಮಂದಿಗೆ ಕೊರೋನ ವೈರಸ್ ದೃಢಪಟ್ಟಿದ್ದರೆ, ಉಳಿದ 161 ಮಂದಿಯ ನೆಗಟಿವ್ ವರದಿ ಬಂದಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ರವಿವಾರ 22 ಮಂದಿಯ ಸ್ಕ್ರೀನಿಂಗ್ ಮಾಡಲಾಗಿದೆ. ಇದರೊಂದಿಗೆ ಈವರೆಗೆ ಸ್ಕ್ರೀನಿಂಗ್ ಮಾಡಿದವರ ಸಂಖ್ಯೆ 38,231ಕ್ಕೇರಿದೆ. ಶನಿವಾರ 3,164 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದರೆ, ಒಂದೇ ದಿನದಲ್ಲಿ ಅದರ ಸಂಖ್ಯೆ ಹೆಚ್ಚಾಗಿದೆ. ಅಂದರೆ, ರವಿವಾರ ಹೋಂ ಕ್ವಾರಂಟೈನ್‌ನಲ್ಲಿರು ವವರ ಸಂಖ್ಯೆ 5875 ಆಗಿದೆ. ಅಂದರೆ, ಇತರ ವಿಮಾನ ನಿಲ್ದಾಣಗಳ ಮೂಲಕ ಪ್ರಯಾಣಿಸಿದ ದ.ಕ.ಜಿಲ್ಲೆಯವರನ್ನು ಗುರುತಿಸಿ ಕ್ವಾರಂಟೈನ್‌ನಲ್ಲಿಡಲಾಗಿದೆ. ವೆನ್ಲಾಕ್ ಆಸ್ಪತ್ರೆಯಲ್ಲಿ ಸದ್ಯ ಯಾರೂ ಕೂಡ ಚಿಕಿತ್ಸೆ ಪಡೆಯುತ್ತಿಲ್ಲ. ಇಎಸ್‌ಐ ಆಸ್ಪತ್ರೆಯಲ್ಲಿ 29 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೆ 11 ಮಂದಿಯನ್ನು ಇತರ ಆಸ್ಪತ್ರೆಯಲ್ಲಿ ನಿಗಾ ವಹಿಸಲಾಗಿದೆ. ಈ ಮಧ್ಯೆ ರವಿವಾರ ಜಿಲ್ಲೆಯ 14 ಮಂದಿಯ ಗಂಟಲು ದ್ರವವನ್ನು ತಪಾಸಣೆಗೆ ರವಾನಿಸಲಾಗಿದೆ. 28 ದಿನದ ನಿಗಾ ಅವಧಿಯನ್ನು 169 ಮಂದಿ ಪೂರೈಸಿದ್ದಾರೆ. ರವಿವಾರ 5 ಮಂದಿಯ ಗಂಟಲಿನ ದ್ರವದ ವರದಿ ಬಂದಿದ್ದು, ಎಲ್ಲವೂ ನೆಗೆಟಿವ್ ಆಗಿದೆ. ಎರಡು ದಿನಗಳ ಕಾಲ ದ.ಕ.ಜಿಲ್ಲೆಯನ್ನು ಸಂಪೂರ್ಣ ಬಂದ್ ಮಾಡಿದ ಕಾರಣ ‘ಸಾಮಾಜಿಕ ಅಂತರ’ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಇದರಿಂದ ಸತತ ಎರಡು ದಿನ ನೆಗೆಟಿವ್ ವರದಿ ಬರಲು ಸಾಧ್ಯವಾಯಿತು ಎಂದು ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಜಿಲ್ಲೆಯ ಆಶಾ ಕಾರ್ಯಕರ್ತೆಯರು ಈವರೆಗೆ 3,61,242 ಮನೆಗಳಿಗೆ ಭೇಟಿ ನೀಡಿ 14,68,323 ಮಂದಿಗೆ ಕೊರೋನ ವೈರಸ್ ತಡೆಗಟ್ಟಲು ವಿಶೇಷ ಜಾಗೃತಿ ಮೂಡಿಸಿದ್ದಾರೆ ಎಂದು ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.





