ಕೋವಿಡ್-19 ಮಹಾಮಾರಿಗೆ ಕಡಿವಾಣ ಹಾಕಲು ಸರ್ಕಾರಕ್ಕೆ ಬೆಂಬಲ ಘೋಷಿಸಿದ ಪ್ರತಿಪಕ್ಷಗಳು

ಬೆಂಗಳೂರು, ಮಾ. 29: ರಾಜ್ಯದಲ್ಲಿ ಕೋವೀಡ್-19 ಮಹಾಮಾರಿಗೆ ಕಡಿವಾಣ ಹಾಕಲು ಪ್ರತಿಪಕ್ಷಗಳು ತುಂಬು ಹೃದಯದ ಸಹಕಾರ ನೀಡುವುದಾಗಿ ಒಕ್ಕೊರಲಿನಿಂದ ಪ್ರಕಟಿಸಿ ಸರ್ಕಾರಕ್ಕೆ ತಮ್ಮ ಬೇಷರತ್ ಬೆಂಬಲ ಘೋಷಿಸಿದ ಅಪರೂಪದ ಘಟನೆಗೆ ಇಲ್ಲಿ ಇಂದು ಸರ್ವಪಕ್ಷಗಳ ಮುಖಂಡರ ಸಭೆ ಸಾಕ್ಷಿಯಾಯಿತು.
ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಸುಮಾರು ಮೂರು ತಾಸುಗಳ ಕಾಲ ನಡೆದ ಈ ಸಭೆಯಲ್ಲಿ ಹೊರಹೊಮ್ಮಿದ ಉಪಯುಕ್ತ ಸಲಹೆಗಳಿಗೆ ಮುಖ್ಯಮಂತ್ರಿ ಕೃತಜ್ಞತೆಗಳನ್ನು ಸಲ್ಲಿಸಿದರಲ್ಲದೆ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಂದಿನ ಹೆಜ್ಜೆ ಇಡಲು ತಾವು ಬದ್ಧರಾಗಿರುವುದಾಗಿ ತಿಳಿಸಿದರು.
ಪ್ರತಿದಿನವೂ ಒಂದಲ್ಲದೊಂದು ಕಾರಣಕ್ಕೆ ಪ್ರಧಾನಿಯವರು ತಮ್ಮ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದ ಪರಿಸ್ಥಿತಿಯ ಮಾಹಿತಿ ಪಡೆಯುತ್ತಿದ್ದಾರೆ. ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರ ತಮಗೆ ದೊರೆತಿದೆ ಎಂದು ಹೇಳಿದ ಮುಖ್ಯಮಂತ್ರಿ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು, ಶುಶ್ರೂಷಕರು ಹಾಗೂ ಅರೆ ವೈದ್ಯಕೀಯ ಸಿಬ್ಬಂದಿಗೆ ವೈಯುಕ್ತಿಕ ರಕ್ಷಣಾ ಉಪಕರಣಗಳನ್ನು, ಮುಖವಾಡಗಳನ್ನು, ಸ್ಯಾನಿಟೈಜರ್‍ಗಳನ್ನು ಪೂರೈಸುವತ್ತ ಅಗತ್ಯ ಕ್ರ ಕೈಗೊಳ್ಳುವುದಾಗಿ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲೂ ಎಲ್ಲಾ ರೀತಿಯ ರಕ್ಷಣಾ ಸಾಧನಾ ಸಲಕರಣೆಗಳನ್ನು ಹಾಗೂ ಪರೀಕ್ಷಾ ಉಪಕರಣಗಳನ್ನು ಒದಗಿಸುವುದಾಗಿ ಸಭೆಗೆ ಭರವಸೆ ನೀಡಿದರು.
ಸಂಚಾರ ನಿರ್ಬಂಧದಿಂದ ರಾಜ್ಯದ ಗಡಿಗಳಲ್ಲಿ ಸಂಕಷ್ಟಕ್ಕೀಡಾಗಿರುವವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಿ ತವರಿಗೆ ಕರೆತರುವ ವ್ಯವಸ್ಥೆ ಮಾಡುವ, ಅದರಲ್ಲಿ ಸೋಂಕಿತರನ್ನು ಕ್ವಾರೆಂಟೈನ್‍ಗೆ ಕಳುಹಿಸುವ ಆರೋಗ್ಯವಂತರನ್ನು ಅವರ ಊರುಗಳಿಗೆ ಕಳುಹಿಸುವ ಭರವಸೆ ನೀಡಿದ ಸಿಎಂ ಅವರು, ಕೃಷಿ ಉತ್ಪನ್ನಗಳ ಸಾಗಣೆ, ಮಾರಾಟ ಮತ್ತು ಬಳಕೆದಾರರಿಗೆ ವಿತರಣೆಗೂ ಸೂಕ್ರ ಕ್ರಮ ಕೈಗೊಳ್ಳುವುದಾಗಿ ಹಾಗೂ ಬಿತ್ತನೆ ಬೀಜ, ರಾಸಾಯನಿಕ ಗೊಬ್ಬರ ಮತ್ತು ಕೀಟನಾಶಕಗಳನ್ನು ಒದಗಿಸಿಕೊಡಲು ಕ್ರಮವಹಿಸುವುದಾಗಿ ಹೇಳಿದರು.
ಗಣ್ಯರು ನೀಡಿದ ಸಲಹೆಗಳು: ರಾಜ್ಯದಲ್ಲೇ ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳು ನಿಲ್ಲಬಾರದು. ಕೃಷಿ ಚಟುವಟಿಕೆಗಳು ನಿಂತರೆ, ಕೇವಲ ರೈತರಿಗೆ ಮಾತ್ರ ನಷ್ಟವಲ್ಲ, ನಂತರ, ಆಹಾರ ಧಾನ್ಯಗಳ ಕೊರತೆ ಉಂಟಾಗಿ ಇದರ ಪರಿಣಾಮವನ್ನು ಎಲ್ಲರೂ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ರಾಜ್ಯದ ಎಲ್ಲಾ 6020 ಪಂಚಾಯತ್‍ಗಳಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಕೃಷಿ ಇಲಾಖೆ ಮತ್ತು ಕೃಷಿ ಮಾರುಕಟ್ಟೆ ಇಲಾಖೆಯ ಓರ್ವ ಪ್ರತಿನಿಧಿಯನ್ನು ನೇಮಕ ಮಾಡಿ, ಆ ಪ್ರದೇಶದ ಜನರ ಆರೋಗ್ಯ ಕಾಯ್ದುಕೊಳ್ಳಲು, ಮಾನಸಿಕ ಸ್ಥೈರ್ಯ ತುಂಬಲು, ಆ ಪ್ರದೇಶದಲ್ಲಿ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿಕೊಡಲು ಹಾಗೂ ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ದೊರಕಿಸಿಕೊಡಲು ಪೂರಕ ವಾತಾವರಣ ನಿರ್ಮಿಸಿ. ಮುಂದಿನ ದಿನಗಳಲ್ಲಿ ಉದ್ಭವಿಸಬಹುದಾದ ಸವಾಲುಗಳನ್ನು ಎದುರಿಸಲು ಹಾಗೂ ಕೋವಿಡ್-19 ರ ವಿರುದ್ಧ ಸಮರ ಸಾರಲು ಈ ಹಿಂದೆ ರಾಜ್ಯ ಸರ್ಕಾರದಲ್ಲಿ ಅಥವಾ ಕೇಂದ್ರ ಸರ್ಕಾರದಲ್ಲಿ ಸೇವೆಯಲ್ಲಿದ್ದು ಸ್ವಯಂ ನಿವೃತ್ತಿಪಡೆದಿರುವ ಹಾಗೂ 60 ವರ್ಷ ವಯೋಮಾನದೊಳಗಿನ ವೈದ್ಯರನ್ನು ಮತ್ತು ಖಾಸಗಿ ವೈದ್ಯರನ್ನು ಕೂಡಲೇ ನೇಮಕ ಮಾಡಿಕೊಳ್ಳಲು ಸರ್ಕಾರಕ್ಕೆ ಮನವಿ ಮಾಡಿದರು.
ವೈದ್ಯಕೀಯ ತಪಾಸಣೆ ನಡೆಸಿ ರಾಜ್ಯಕ್ಕೆ ಮರಳಲು ಗೋವಾ, ಮಹಾರಾಷ್ಟ್ರ, ಆಂಧ್ರ ಪ್ರದೇಶ, ತೆಲಂಗಾಣ, ಕೇರಳ ಮತ್ತು ತಮಿಳು ನಾಡು ಗಡಿಯಲ್ಲಿ ಕಾಯುತ್ತಿರುವ ಕನ್ನಡಿಗರನ್ನು ಕರೆತನ್ನಿ ಅಂತ್ಯೋದಯ ಮತ್ತು ಬಡತನ ರೇಖೆಗಿಂತಲೂ ಕೆಳಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ನೀಡುವ ಏಳು ಕೆ ಜಿ ಆಹಾರ ಧಾನ್ಯ ಹಾಗೂ ಕೇಂದ್ರ ಸರ್ಕಾರ ಏಪ್ರಿಲ್ ಮಾಹೆಯಲ್ಲಿ ನೀಡಲು ಘೋಷಿಸಿರುವ ಐದು ಕೆ ಜಿ ಪಡಿತರವನ್ನು ನ್ಯಾಯಬೆಲೆ ಅಂಗಡಿಗಳಲ್ಲಿ ವಿತರಿಸುವ ಬದಲು ಜನ ಸಂದಣ ಯಾಗದಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಅನುಕೂಲವಾಗುವಂತೆ ಮನೆ-ಮನೆಗೆ ಪಡಿತರ ವಿತರಣೆ ಸಾಧ್ಯವೇ? ಎಂಬುದನ್ನು ಪರಿಶೀಲಿಸಿ ಎಂದರು.
ಹೊರದೇಶಗಳಿಂದ ಬಂದವರನ್ನು ತಿರುಗಾಡಲು ಬಿಟ್ಟು ನಾವು ಎಡವಿದ್ದೇವೆ. ವಿದೇಶದಿಂದ ಬಂದವರನ್ನು ಆಗಲೇ ಕ್ವಾರೆಂಟೈನ್ ಮಾಡಿದ್ದರೆ, ನಾವು ಇಂತಹ ಸಂದಿಗ್ಧಕ್ಕೆ ಸಿಲುಕುತ್ತಿರಲಿಲ್ಲ ಎಂದು ಜೆಡಿಎಸ್ ಮುಖಂಡ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.
ಸೋಂಕಿನಿಂದಲ್ಲ. ಜನ ಆತಂಕದಿಂದಲೂ ಸಾಯುವ ಸ್ಥಿತಿ ತಲುಪುತ್ತಾರೆ. ಜನಸಾಮಾನ್ಯರಿಗೆ ಧೈರ್ಯ ತುಂಬುವ ಕೆಲಸವಾಗಬೇಕು. ಒಂದೆಡೆ ರಾಜ್ಯದಲ್ಲಿ ವೆಂಟಿಲೇಟರ್‍ಗಳ ಕೊರತೆ ಇದೆ. ಮತ್ತೊಂದೆಡೆ ಚೀನಾದಿಂದ ಆಮದಾಗುತ್ತಿರುವ ಪರೀಕ್ಷಾ ಸಾಧನಗಳು ಶೇಕಡಾ 30 ರಷ್ಟು ಪರಿಣಾಮಕಾರಿ ಇಲ್ಲ ಎಂದು ತಿಳಿದು ಬಂದಿದೆ. ರಾಜ್ಯದಲ್ಲಿ ಲಭ್ಯವಿರುವ ಕೈಗವಸುಗಳು ಅಥವಾ ಕೆಚ್ಚಿಲುಗಳು ( ಗ್ಲೌಸ್‍ಗಳು ), ನಿಲುವಂಗಿಗಳು ( ಗೌನ್ಸ್ ) ಹಾಗೂ ಮುಖವಾಡಗಳು ( ಮಾಸ್ಕ್ಸ್ ) ಗುಣಮಟ್ಟದ್ದಲ್ಲ ಎಂದು ಹೇಳಲಾಗುತ್ತಿದೆ. ಅವೂ ಕೂಡಾ ಅವಶ್ಯಕತೆಗೆ ಅನುಗುಣವಾಗಿ ಲಭಿಸುತ್ತಿಲ್ಲ. ಎಲ್ಲಕ್ಕೂ ಮಿಗಿಲಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯಲ್ಲಿನ ಹನ್ನೊಂದು ಸೂತ್ರಗಳಂತೆ ಕೋವಿಡ್-19 ನಿಂದ ಸತ್ತ ವ್ಯಕ್ತಿಗಳಿಗೆ ಸಂಸ್ಕಾರ ಮಾಡಲಾಗುತ್ತಿದೆಯೇ ? ಎಂಬುದನ್ನು ಸರ್ಕಾರ ಖಚಿತಪಡಿಸಬೇಕು ಎಂದು ಒತ್ತಾಯಿಸಿದರು.
ರಾಮನಗರ ಜಿಲ್ಲೆಯ ಎಲ್ಲಾ ತಾಲ್ಲುಕುಗಳ ಜನತೆಗೆ ಒದಗಿಸಲು ತಾವು ವೈಯುಕ್ತಿಕವಾಗಿ ಹತ್ತು ಸಾವಿರ ಮಾಸ್ಕ್ ಗಳನ್ನು ಖರೀದಿಸಿ ನೀಡಿರುವುದಾಗಿ ತಿಳಿಸಿದ ಅವರು ಇನ್ನೂ 50,000 ಮಾಸ್ಕ್ ಗಳನ್ನು ಖರೀದಿಸಿ ಒದಗಿಸಲು ಮುಂದಾಗಿರುವುದಾಗಿ ಹೆಚ್ ಡಿ ಕುಮಾರಸ್ವಾಮಿ ಅವರು ಪ್ರಕಟಿಸಿದರು.
ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥನಾರಾಯಣ್ ಮತ್ತು ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಆರೋಗ್ಯ ಸಚಿವ ಬಿ ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್, ಕಾನೂನು ಮತ್ತು ಸಂಸದೀಯ ವ್ಯಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ ಎಂ ವಿಜಯ್ ಭಾಸ್ಕರ್, ಅಪರ ಮುಖ್ಯ ಕಾರ್ಯದರ್ಶಿಗಳಾದ ವಂದಿತಾ ಶರ್ಮ, ರಜನೀಶ್ ಗೋಯಲ್, ಜಾವೇದ್ ಅಖ್ತರ್, ಮುಖ್ಯಮಂತ್ರಿಯವರ ಅಪರ ಮುಖ್ಯ ಕಾರ್ಯದರ್ಶಿ ಪಿ ರವಿ ಕುಮಾರ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಯುಕ್ತ ಬಿ ಹೆಚ್ ಅನಿಲ್ ಕುಮಾರ್, ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಮತ್ತು ಮಹಾ ನಿರೀಕ್ಷಕ ಪ್ರವೀಣ್ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎಸ್ ಸೆಲ್ವ ಕುಮಾರ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಪಾಂಡೆ ಅವರೂ ಸೇರಿದಂತೆ ಹಲವು ಗಣ್ಯರು ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
.jpg)







