ಐದು ಕೇಂದ್ರಗಳಲ್ಲಿ ನೂರಾರು ಕಾರ್ಮಿಕರು: ಊಟ ಉಪಹಾರ ಪೂರೈಕೆ
ವಲಸೆ ಕಾರ್ಮಿಕರಿಗೆ ಉಡುಪಿ ಜಿಲ್ಲಾಡಳಿತದಿಂದ ಆಶ್ರಯ ವ್ಯವಸ್ಥೆ

ಉಡುಪಿ, ಮಾ. 29: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ತಮ್ಮ ತಮ್ಮ ಊರಿಗೆ ಹೊರಟಿದ್ದ ಹಾಗೂ ಕೂಲಿ ಇಲ್ಲದೆ ಅತಂತ್ರರಾಗಿದ್ದ ಉತ್ತರ ಕರ್ನಾಟಕ ಜಿಲ್ಲೆಗಳ ನೂರಾರು ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಜಿಲ್ಲೆಯ ವಿವಿಧ ಭಾಗಗಳಲ್ಲಿ ವಸತಿ ಸೇರಿದಂತೆ ಮೂಲಭೂತ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಉಡುಪಿ ಹಾಗೂ ದ.ಕ. ಜಿಲ್ಲೆಗಳಲ್ಲಿರುವ ಬಾಗಲಕೋಟೆ, ಬಿಜಾಪುರ, ಗದಗ, ಕುಷ್ಟಗಿ ಸೇರಿದಂತೆ ವಿವಿಧ ಜಿಲ್ಲೆಗಳ ವಲಸೆ ಕಾರ್ಮಿಕರು ಲಾರಿ ಸಹಿತ ವಿವಿಧ ವಾಹನಗಳಲ್ಲಿ ತಮ್ಮ ಊರಿಗೆ ತೆರಳಲು ಪ್ರಯತ್ನಿಸಿದ್ದು, ಇವರನ್ನು ಜಿಲ್ಲೆಯ ಗಡಿ ಪ್ರದೇಶವಾಗಿರುವ ಶಿರೂರಿನಲ್ಲಿ ತಡೆ ಹಿಡಿದು ವಾಪಾಸ್ಸು ಕರೆದು ಕೊಂಡು ಬರಲಾಗಿದೆ. ಅದೇ ರೀತಿ ಜಿಲ್ಲೆಯ ವಿವಿಧ ಕಡೆಗಳಲ್ಲಿ ಕೂಲಿ, ವಸತಿ ಹಾಗೂ ಆಹಾರ ಇಲ್ಲದೆ ನೂರಾರು ಸಂಖ್ಯೆಯ ವಲಸೆ ಕಾರ್ಮಿಕರು ದಿಕ್ಕು ತೋಚದಂತಾಗಿದ್ದಾರೆ.
ಇವರೆಲ್ಲರಿಗೂ ಉಡುಪಿ ಜಿಲ್ಲಾಡಳಿತ ಸೂರು ಕಲ್ಪಿಸಲು ಮುಂದಾಗಿದೆ. ಅದರಂತೆ ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ಕಾಲೇಜಿನಲ್ಲಿ 262, ಉಡುಪಿಯ ಬೋರ್ಡ್ ಹೈಸ್ಕೂಲ್‌ನಲ್ಲಿ 120, ಕುಂದಾಪುರ ನೆಹರು ಮೈದಾನದ ಹಾಸ್ಟೆಲ್‌ನಲ್ಲಿ 30, ಕಾರ್ಕಳದ ಹಾಸ್ಟೇಲ್‌ನಲ್ಲಿ 50-60, ಬೈಂದೂರಿನ ಹಾಸ್ಟೆಲ್‌ನಲ್ಲಿ 65 ಮಂದಿ ಕಾರ್ಮಿಕರಿಗೆ ಆಶ್ರಯ ನೀಡಲಾಗಿದೆ.
ಇವರಿಗೆ ಸ್ಥಳೀಯ ದೇವಸ್ಥಾನ, ಸ್ಥಳೀಯಾಡಳಿತ ಹಾಗೂ ದಾನಿಗಳ ನೆರವಿ ನಿಂದ ಮೂರು ಹೊತ್ತಿನ ಊಟ ಹಾಗೂ ಬೆಳಗ್ಗಿನ ಉಪಹಾರ ಮತ್ತು ಚಾ, ಬಿಸ್ಕೆಟ್, ಶೌಚಾಲಯ ವ್ಯವಸ್ಥೆ, ಸೋಪು ಸೇರಿದಂತೆ ಇತರ ಅಗತ್ಯವಸ್ತುಗಳನ್ನು ಕಲ್ಪಿಸಲಾಗುತ್ತಿದೆ. ಆಯಾ ತಾಲೂಕಿನ ತಹಶೀಲ್ದಾರುಗಳು ಇದರ ಉಸ್ತುವಾರಿ ವಹಿಸಿಕೊಂಡಿದ್ದಾರೆ.
ಉಡುಪಿ ಕೇಂದ್ರದಲ್ಲಿ ಕೇವಲ ಪುರುಷ ಕಾರ್ಮಿಕರೇ ಇದ್ದರೆ, ಬಾರಕೂರಿನಲ್ಲಿ ಇಬ್ಬರು ಗರ್ಭಿಣಿಯರು ಸಹತಿ 85 ಮಂದಿ ಮಹಿಳೆಯರು ಹಾಗೂ 177 ಮಂದಿ ಪುರುಷರು ಹಾಗೂ ಮಕ್ಕಳು ಇದ್ದಾರೆ. ಪ್ರತಿಯೊಬ್ಬರಿಗೂ ನಿತ್ಯ ಎರಡು ಬಾರಿ ವೈದ್ಯಕೀಯ ತಪಾಸಣೆ ಮಾಡಲಾಗುತ್ತಿದೆ.
ಸಾಮಾಜಿಕ ಅಂತರವನ್ನು ಪಾಲಿಸುವ ನಿಟ್ಟಿನಲ್ಲಿ ಪ್ರತಿಯೊಂದು ಕೇಂದ್ರಗಳಲ್ಲಿ ರುವ ಪ್ರತ್ಯೇಕ ಕೊಠಡಿಗಳಲ್ಲಿ ನಿಗದಿತ ಸಂಖ್ಯೆಯ ಕಾರ್ಮಿಕ ರನ್ನು ಇರಿಸಿಕೊಳ್ಳ ಲಾಗಿದೆ. ಈ ಕೇಂದ್ರಗಳಿಂದ ಯಾರು ಕೂಡ ಹೊರಗಡೆ ಹೋಗದಂತೆ ಕಟ್ಟೆಚ್ಚರ ವಹಿಸಲಾಗಿದ್ದು, ರಾತ್ರಿ ವೇಳೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗುತ್ತಿದೆ ಎಂದು ಉಡುಪಿ ತಹಶೀಲ್ದಾ್ ಪ್ರದೀಪ್ ಕುರ್ಡೇಕರ್ ತಿಳಿಸಿದ್ದಾರೆ.
ಕಾಪು ತಾಲೂಕಿನಲ್ಲಿ ಮೂರು ಕೇಂದ್ರ
ವಲಸೆ ಕಾರ್ಮಿಕರಿಗೆ ಕಾಪು ತಾಲ್ಲೂಕಿನಲ್ಲಿ ಮೂರು ಕಡೆ ಆಶ್ರಯ ಕೇಂದ್ರ ತೆರೆಯಲಾಗಿದೆ. ಆದರೆ ಈವರೆಗೆ ಯಾವುದೇ ಕಾರ್ಮಿಕರು ಬಂದು ಇಲ್ಲಿ ಆಶ್ರಯ ಪಡೆದಿಲ್ಲ. ತಾಲೂಕಿನಲ್ಲಿರುವ ವಲಸೆ ಕಾರ್ಮಿಕರು ಎಲ್ಲಿಯೂ ಹೊರಗೆ ಹೋಗು ವಂತಿಲ್ಲ. ಇವರಿಗಾಗಿ ಪಡುಬಿದ್ರಿಯ ಬೋರ್ಡು ಶಾಲೆ, ಕಾಪುವಿನ ಹಾಸ್ಟೆಲ್ ಹಾಗೂ ಕಟಪಾಡಿಯ ಎಸ್‌ವಿಎಸ್ ಕಾಲೇಜಿನಲ್ಲಿ ಆಶ್ರಯ ಕೇಂದ್ರಗಳನ್ನು ತೆರೆ ಯಲಾಗಿದೆ. ಅಲ್ಲದೆ ಇನ್ನೂ ಹೆಚ್ಚು ಅಗತ್ಯ ಬಂದರೆ ಕಾಪುವಿನ ಸುನಾಮಿ ಸೆಲ್ಟರ್‌ನಲ್ಲಿಯೂ ವ್ಯವಸ್ಥೆಕಲ್ಪಿಸಲಾಗುವುದು ಎಂದು ಕಾಪು ತಹಶೀಲ್ದಾ್ ಮುಹಮ್ಮದ್ ಇಸ್ಹಾಕ್ ತಿಳಿಸಿದ್ದಾರೆ.
‘ಮನೆಯಲ್ಲಿ ಹೆಂಡತಿ ತುಂಬು ಗರ್ಭಿಣಿ. ಲಾಕ್‌ಡೌನ್‌ನಿಂದ ಕೂಲಿ ಕೆಲಸ ಇಲ್ಲವಾಗಿದೆ. ಲಾರಿ ಚಾಲಕನಿಗೆ 1000ರೂ. ಹಣ ನೀಡಿ, ಮಾ.27ರಂದು ಮಂಗಳೂರಿನಿಂದ ಹೊರಟಿದ್ದೇವೆ. ಆದರೆ ಪೊಲೀಸರು ನಮಗೆ ಮುಂದಕ್ಕೆ ಹೋಗಲು ಅವಕಾಶ ನೀಡದೆ ಆಶ್ರಯ ಒದಗಿಸಿ ದ್ದಾರೆ. ನನ್ನ ಬರುವಿಕೆಗೆ ಹೆಂಡತಿ ಹಾಗೂ ಅನಾರೋಗ್ಯ ಪೀಡಿತ ತಾಯಿ ಕಾಯುತ್ತಿದ್ದಾರೆ. ಒಮ್ಮೆ ಊರಿಗೆ ಹೋದರೆ ಮತ್ತು ಇಲ್ಲಿಗೆ ಬರುವುದಿಲ್ಲ. ಅಲ್ಲಿನ ಕಡಿಮೆ ಕೂಲಿಯಲ್ಲಿಯೇ ಜೀವನ ಸಾಗಿಸುತ್ತೇನೆ.
-ಮಾದೇಶ(ಬಾರಕೂರು ಕೇಂದ್ರದಲ್ಲಿರುವ ಗದಗ ಜಿಲ್ಲೆಯ ವಲಸೆ ಕಾರ್ಮಿಕ)
ನೂರಾರು ಸಂಖ್ಯೆಯ ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದ ವತಿಯಿಂದ ಆಶ್ರಯ ಕಲ್ಪಿಸಲಾಗಿದ್ದು, ಜಿಲ್ಲೆಯ ಹಲವು ಕಡೆಗಳಲ್ಲಿ ಸ್ಥಾಪಿಸಲಾಗಿರುವ ಆಶ್ರಯ ಕೇಂದ್ರಗಳಲ್ಲಿ ಅವರಿಗೆ ಎಲ್ಲ ವ್ಯವಸ್ಥೆಯನ್ನು ಒದಗಿಸಿ ಇರಿಸಲಾಗಿದೆ. ಇದರ ಉಸ್ತುವಾರಿಯನ್ನು ಆಯಾ ತಾಲೂಕಿನ ತಹಶೀಲ್ದಾರ್ ಗಳಿಗೆ ವಹಿಸಿ ಕೊಡಲಾಗಿದೆ.
- ರಾಜು ಕೆ., ಸಹಾಯಕ ಕಮಿಷನರ್, ಕುಂದಾಪುರ.







