ಕಾಲ್ನಡಿಗೆಯಲ್ಲಿ ಬಂದ ವಲಸೆ ಕಾರ್ಮಿಕರು: ಕದ್ರಿ ಗಂಜಿ ಕೇಂದ್ರಕ್ಕೆ ವಾಪಾಸು

ಪಡುಬಿದ್ರಿ, ಮಾ.29: ಲಾಕ್‌ಡೌನ್‌ನಿಂದ ಕಂಗೆಟ್ಟು ಮಂಗಳೂರಿನಿಂದ ಕಾಲ್ನಡಿಗೆಯಲ್ಲಿ ಊರಿಗೆ ಹೊರಟಿದ್ದ ಉತ್ತರ ಕರ್ನಾಟಕದ ವಲಸೆ ಕಾರ್ಮಿಕ ರನ್ನು ಪಡುಬಿದ್ರಿ ಪೊಲೀಸರು ತಡೆದು, ಕದ್ರಿಯಲ್ಲಿರುವ ಆಶ್ರಯ ಕೇಂದ್ರಕ್ಕೆ ವಾಪಾಸು ಕಳುಹಿಸಿರುವ ಘಟನೆ ರವಿವಾರ ನಡೆದಿದೆ.
ಮಂಗಳೂರು ಬಿ.ಸಿ.ರೋಡ್‌ನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಹುಬ್ಬಳ್ಳಿ, ಧಾರವಾಡ, ಬಿಜಾಪುರ ಮೂಲದ ಸುಮಾರು 26 ಮಂದಿ ಕೂಲಿ ಕಾರ್ಮಿಕರು ತಮ್ಮ ಊರಿಗೆ ತೆರಳಲು ಕಾಲ್ನಡಿಗೆ ಮೂಲಕ ಉಡುಪಿ ಜಿಲ್ಲೆಯ ಗಡಿ ದಾಟಿ ಪಡುಬಿದ್ರಿ ತಲುಪಿದ್ದರು. ಕಾಪು ಠಾಣಾಧಿಕಾರಿ ರಾಜಶೇಖರ ಸಾಗನೂರು ಇವರನ್ನು ತಡೆದು ವಿಚಾರಿಸಿದರು.
ಈ ವೇಳೆ ಕಾರ್ಮಿಕರು ತಮ್ಮ ಊರಿಗೆ ಮರಳಲು ಯಾವುದೇ ರೀತಿಯ ವ್ಯವಸ್ಥೆ ಇಲ್ಲವಾಗಿದ್ದು, ಅತ್ತ ಊರು ಇಲ್ಲದೆ, ಇತ್ತ ವ್ಯವಸ್ಥೆಯೂ ಇಲ್ಲದೆ ನಾವೆಲ್ಲ ಅತಂತ್ರರಾಗಿದ್ದೇವೆ. ನಮ್ಮನ್ನು ನಮ್ಮ ಊರಿಗೆ ತೆರಳಲು ಬಿಡಿ. ನಾವು ಅಲ್ಲಿಯೇ ಇರುತ್ತೇವೆ. ಇಲ್ಲದಿದ್ದಲ್ಲಿ ಬಿ.ಸಿ.ರೋಡಿನಲ್ಲಿರುವ ನಮ್ಮ ಬಾಡಿಗೆ ಮನೆಗೆ ಕರೆದು ಕೊಂಡು ಹೋಗಿ ಬಿಡಿ. ಯಾವುದೇ ಕಾರಣಕ್ಕೂ ನಾವು ಕದ್ರಿಯಕೇಂದ್ರಕ್ಕೆ ೋಗುವುದಿಲ್ಲ ಎಂದು ಕಣ್ಣೀರಿಟ್ಟರು.
ಬಳಿಕ ಪೊಲೀಸರು ಈ ಕುರಿತ ಮೇಲಾಧಿಕಾರಿಗಳ ಸೂಚನೆಯಂತೆ ಈ ಎಲ್ಲ ಕಾರ್ಮಿಕರನ್ನು ಸಮಾಧಾನ ಪಡಿಸಿ, ಪಲಿಮಾರು ಗ್ರಾಪಂ ಅಧ್ಯಕ್ಷ ಜಿತೇಂದ್ರ ಪುರ್ಟಾಡೋ ಅವರ ಗೂಡ್ಸ್ ವಾಹನದಲ್ಲಿ ಮಂಗಳೂರು ಕದ್ರಿಯ ಕೇಂದ್ರಕ್ಕೆ ಸಾಗಿಸಿದರು. ಅವರೋಂದಿಗೆ ಓರ್ವ ಪೊಲೀಸ್ ಸಿಬ್ಬಂದಿ ಕೂಡ ಪ್ರಯಾಣ ಬೆಳೆಸಿದ್ದಾರೆ.
ಕೇರಳದ ವ್ಯಕ್ತಿಗೆ ಸೂಚನೆ: ಮೀನಿನ ಲಾರಿಯಲ್ಲಿ ಕೇರಳಕ್ಕೆ ತೆರಳಿ ವಾಪಾಸು ಬಂದಿರುವ ಹೆಜಮಾಡಿಯ ಎಸ್‌ಎಸ್ ರೋಡ್‌ನ ವ್ಯಕ್ತಿಯೊಬ್ಬರು ಅಲ್ಲಲ್ಲಿ ತಿರುಗಾಡುತ್ತಿರುವ ಕುರಿತು ಬಂದ ಮಾಹಿತಿಯಂತೆ ಪೊಲೀಸರು, ಆರೋಗ್ಯಾಧಿಕಾರಿ ಸಿಬ್ಬಂಧಿಗಳು ಆತನ ಮನೆಗೆ ತೆರಳಿ ಎಚ್ಚರಿಕೆ ನೀಡಿದರು. ಯಾವುದೇ ಕಾರಣಕ್ಕೂ 14ದಿನ ಮನೆಯಿಂದ ಹೊಗೆ ಬಾರದಂತೆ ಸೂಚನೆ ನೀಡಿದರು.







