ಉಡುಪಿ: ಕೌಟುಂಬಿಕ ಆಧಾರವಿಲ್ಲದ ಹಿರಿಯರ ಮನೆಗೇ ಅಗತ್ಯ ವಸ್ತುಗಳ ಸರಬರಾಜು
ಉಡುಪಿ, ಮಾ. 29: ಕೊರೋನ ವೈರಸ್ (ಕೋವಿಡ್-2019) ಸೋಂಕು ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಈಗಾಗಲೇ ಸಿಆರ್‌ಪಿಸಿ ಸೆಕ್ಷನ್ 144(3)ರಡಿ ನಾಗರಿಕರ ಸಂಚಾರವನ್ನು ನಿರ್ಬಂಧಿಸಿ ಆದೇಶ ಹೊರಡಿಸಲಾಗಿದೆ. ಇದರಂತೆ ಜನರು ಹೊರಗೆ ಸಂಚರಿಸುವುದನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ನಿರ್ಬಂಧಗಳನ್ನು ಇನ್ನಷ್ಟು ಬಿಗು ಗೊಳಿಸುವ ಪ್ರಯತ್ನವಾಗಿ ಜನರಿಗೆ ಅಗತ್ಯವಿರುವ ದಿನಸಿ ಸಾಮಗ್ರಿಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ನಿಗದಿತ ಸಮಯದಲ್ಲಿ ಮಾತ್ರ ಸಾಮಾಜಿಕ ಅಂತರವನ್ನು ಪಾಲಿಸಿ ಖರೀದಿಸಲು ಅವಕಾಶ ನೀಡಿ ಪ್ರತಿದಿನ ಬೆಳಗ್ಗೆ 7 ರಿಂದ 11 ರವರೆಗೆ ಸಮಯ ನಿಗದಿ ಪಡಿಸಿ ಆದೇಶ ಹೊರಡಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ನಗರ ಪ್ರದೇಶದಲ್ಲಿ ಇರುವ 60 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟ ವಯೋಮಾನದ (ಯಾವುದೇ ಕೌಟುಂಬಿಕ ಆಧಾರ ಇಲ್ಲದ) ನಾಗರಿಕರು ತಮ್ಮ ದೈನಂದಿನ ಉಪಯೋಗದ ಅಗತ್ಯ ವಸ್ತುಗಳನ್ನು ಮಾರುಕಟ್ಟೆಗೆ ಬಂದು ಕೊಂಡುಕೊಳ್ಳುವುದು ಕಷ್ಟಕರವಾಗಿರುವುದರಿಂದ, ಜಿಲ್ಲೆಯ ನಗರ ಪ್ರದೇಶಗಳಾದ ಉಡುಪಿ ನಗರಸಭೆ, ಕುಂದಾಪುರ, ಕಾಪು ಮತ್ತು ಕಾರ್ಕಳ ಪುರಸಭೆ ಹಾಗೂ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ವಾಸವಾಗಿರುವ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರ ಕುಟುಂಬಗಳಿಗೆ ಅಗತ್ಯ ವಸ್ತುಗಳು ಹಾಗೂ ಔಷಧಿಯನ್ನು ಅವರ ಮನೆಗೆ ಸರಬರಾಜು ಮಾಡಲು ನಿರ್ಧರಿಸಲಾಗಿದೆ.
ಆದುದರಿಂದ ಅವರು ಒಂದು ವಾರದ ಮಟ್ಟಿಗೆ ತಮಗೆ ಅಗತ್ಯವಿರುವ ತರಕಾರಿ, ದಿನಸಿ, ಹಣ್ಣುಹಂಪಲು, ಔಷಧಿ ಮುಂತಾದ ಅಗತ್ಯ ವಸ್ತು ಗಳನ್ನು ಪಟ್ಟಿ ಮಾಡಿ ಮನೆಯ ಸಂಪೂರ್ಣ ವಿಳಾಸ, ಅವರ ಮನೆಯ ಪ್ರಮುಖ ಗುರುತಿನೊಂದಿಗೆ ಕೆಳಗೆ ನಮೂದಿಸಿದ ಅಧಿಕಾರಿಗಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಮಾಇತಿ ನೀಡುವಂತೆ ಕೋರಲಾಗಿದೆ. ಮನೆಯ ವಿಳಾಸ ಹಾಗೂ ಅಗತ್ಯ ಸಾಮಗ್ರಿಗಳ ಪಟ್ಟಿಯನ್ನು ವ್ಯಾಟ್ಸ್ಅಪ್ ಮೂಲಕವೂ ಕಳುಹಿಸಬಹುದು.
ನಗರ ಪ್ರದೇಶಗಳಲ್ಲಿ ವಾಸವಿರುವ ಎಲ್ಲಾ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಈ ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ. ಸಂಪರ್ಕಿಸಬೇಕಾದ ಅಧಿಕಾರಿಗಳ ವಿವರ ಮತ್ತು ದೂರವಾಣಿ ಸಂಖ್ಯೆ.
ಉಡುಪಿ ನಗರಸಭಾ ವ್ಯಾಪ್ತಿಯ ನಿವಾಸಿಗಳು: ಆನಂದ ಕಲ್ಲೊಳಿಕರ, ಪೌರಾಯುಕ್ತರು ನಗರಸಭೆ-9740019211, ಮೋಹನರಾಜು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್-9342594242, ಸ್ನೇಹಾ, ಪರಿಸರ ಇಂಜಿನಿಯರ್-9164397765, ಧನಂಜಯ, ಕಂದಾಯ ಅಧಿಕಾರಿ- 8762083841.
ಕುಂದಾಪುರ ಪುರಸಭಾ ವ್ಯಾಪ್ತಿಯ ನಿವಾಸಿಗಳು: ರಾಘವೇಂದ್ರ, ಪರಿಸರ ಇಂಜಿನಿಯರ್-9448507244, ಕಾರ್ಕಳ ಪುರಸಭಾ ವ್ಯಾಪ್ತಿಯ ನಿವಾಸಿಗಳು: ರೇಖಾ ಶೆಟ್ಟಿ, ಮುಖ್ಯಾಧಿಕಾರಿ ಪುರಸಭೆ ಕಾರ್ಕಳ-9900948873, ಕಾಪು ಪುರಸಭಾ ವ್ಯಾಪಬ್ತಿಯ ನಿವಾಸಿಗಳು: ರವಿಪ್ರಕಾಶ್, ಪರಿಸರ ಇಂಜಿನಿಯರ್- 7624851225, ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ನಿವಾಸಿಗಳು: ಅರುಣ್, ಮುಖ್ಯಾಧಿಕಾರಿ ಪ.ಪಂಚಾಯತ್ ಸಾಲಿಗ್ರಾಮ-9449943882, ಮಮತಾ, ಆರೋಗ್ಯ ನಿರೀಕ್ಷಕರು-9035627273.







