ಉಡುಪಿ: ಅಗತ್ಯ ಇರುವವರಿಗೆ ಮಾಸ್ಕ್, ನೀರು ವಿತರಿಸಿ ಮಾದರಿಯಾದ ಪೊಲೀಸ್ ಅಧಿಕಾರಿ

ಉಡುಪಿ, ಮಾ.29: ಲಾಕ್‌ಡೌನ್ ಹಿನ್ನೆಲೆಯಲ್ಲಿ ಪೊಲೀಸರು ಹೊರಗಡೆ ಬಂದವರಿಗೆ ಲಾಠಿ ಪ್ರಹಾರ ನಡೆಸುತ್ತಿರುವ ಮಧ್ಯೆ ಉಡುಪಿಯ ಪೊಲೀಸ್ ವೃತ್ತ ನಿರೀಕ್ಷಕ ಮಂಜುನಾಥ್, ಅಗತ್ಯ ಇರುವವರಿಗೆ ನೀರು, ಮಾಸ್ಕ್‌ಗಳನ್ನು ನೀಡುವ ಮೂಲಕ ಮಾದರಿಯಾಗಿದ್ದಾರೆ.
ತನ್ನ ಪೊಲೀಸ್ ವಾಹನದಲ್ಲಿ ಸದಾ ಇಂದಿನ ಅತಿ ಅಗತ್ಯವಾಗಿರುವ ಮಾಸ್ಕ್, ರಸ್ಕ್ ಹಾಗೂ ನೀರಿನ ಬಾಟಲಿಗಳನ್ನು ಇಟ್ಟು ಗಸ್ತು ತಿರುಗುವ ಮಂಜುನಾಥ್, ಬಂದೋಬಸ್ತ್ ಕರ್ತವ್ಯದ ಮಧ್ಯೆಯೂ ಅಶಕ್ತರು ಹಾಗೂ ತೀರಾ ಕಷ್ಟದಲ್ಲಿ ರುವವರಿಗೆ ಇವುಗಳನ್ನು ಒದಗಿಸುವ ಮೂಲಕ ಮಾನವೀಯತೆ ಮೆರೆಯುತ್ತಿ ದ್ದಾರೆ. ಅಲ್ಲದೆ ಜನರಿಗೆ ಮಾಸ್ಕ್ ಮಹತ್ವ ಹಾಗೂ ಕೊರೋನ ವೈರಸ್ ಬಗ್ಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಇಂದು ಸಿಟಿ ಬಸ್ ನಿಲ್ದಾಣ, ಬನ್ನಂಜೆಯಲ್ಲಿದ್ದ ನಿರಾಶ್ರಿತರಿಗೆ, ಗುಜ್ಜರಬೆಟ್ಟು ವಿನಲ್ಲಿ ಮಾಸ್ಕ್ ಇಲ್ಲದೆ ಕಷ್ಟದಲ್ಲಿದ್ದ ಸ್ಥಳೀಯರಿಗೆ ಇವರು ಮಾಸ್ಕ್ ಗಳನ್ನು ವಿತರಿ ಸುವ ಮೂಲಕ ನೆರವಾಗಿದ್ದಾರೆ. ಅದೇ ರೀತಿ ಕಷ್ಟದಲ್ಲಿರುವವರಿಗೆ ನೀರು, ರಸ್ಕ್ ಗಳನ್ನು ನೀಡುವ ಕಾರ್ಯಲ್ಲೂ ಇವರು ತೊಡಗಿಸಿಕೊಂಡಿದ್ದಾರೆ.
‘ಬ್ಯಾಂಕ್ ಆಫ್ ಬರೋಡ ಉಡುಪಿ ಪ್ರಾದೇಶಿಕ ಕಚೇರಿಯವರು ಕೊಡುಗೆ ಯಾಗಿ ನೀಡಿರುವ ಸುಮಾರು 100 ಮಾಸ್ಕ್‌ಗಳ ಪೈಕಿ, ಕೆಲವು ಮಾಸ್ಕ್ ಗಳನ್ನು ನಮ್ಮ ಪೊಲೀಸ್ ಸಿಬ್ಬಂದಿಗಳಿಗೆ ನೀಡಿ, ಉಳಿದ ಮಾಸ್ಕ್‌ಗಳನ್ನು ಹಣಕಾಸಿನ ಸಮಸ್ಯೆಯಿಂದ ಹಾಗೂ ಕೊರತೆಯಿಂದ ಮಾಸ್ಕ್ ಹಾಕದೆ ರಸ್ತೆ ಬದಿ ತಿರುಗುವ ಕಾರ್ಮಿಕರು, ಬಡವರು ಹಾಗೂ ಭಿಕ್ಷುಕರುಗಳಿಗೆ ನೀಡುತ್ತಿದ್ದೇವೆ’ ಎಂದು ವೃತ್ತ ನಿರೀಕ್ಷಕ ಮಂಜುನಾಥ್ ತಿಳಿಸಿದರು.








