ಮುಅಲ್ಲಿಮ್ ರಿಗೆ ರಜಾ ವೇತನ ನೀಡಲು ಸುನ್ನಿ ನಾಯಕರ ಮನವಿ
ಮಂಗಳೂರು, ಮಾ.31:ಕೊರೋನ ವೈರಸ್ ನಿಗ್ರಹ ನಿಮಿತ್ತ ಲಾಕ್‌ಡೌನ್ ಹಿನ್ನೆಲೆಯಲ್ಲಿ ಮದ್ರಸ ಕಾರ್ಯಾಚರಣೆಯು ಸ್ಥಗಿತಗೊಂಡಿದ್ದು ಮದ್ರಸ ಸೇವೆಯಲ್ಲಿರುವ ಮುಅಲ್ಲಿಮರಿಗೆ ರಜಾಕಾಲದ ವೇತನದೊಂದಿಗೆ ಹೆಚ್ಚುವರಿ ಸೌಲಭ್ಯವನ್ನು ನೀಡಬೇಕು ಎಂದು ಸುನ್ನಿ ನಾಯಕರು ಮನವಿ ಮಾಡಿದ್ದಾರೆ.
ಮದ್ರಸ ಸೇವೆಗೆ ಅನುಕೂಲ ವಾತಾವರಣ ಹಾಗೂ ಆರ್ಥಿಕ ಸಹಕಾರ ಸಂಪೂರ್ಣ ಸ್ಥಬ್ಧ ವಾಗಿರುವುದರಿಂದ ನಿಸ್ವಾರ್ಥ ಸೇವಾ ಮನೋಭಾವದ ಮುಅಲ್ಲಿಮರಿಗೆ ಸರ್ವ ರೀತಿಯ ಸಹಾಯ ಸಹಕಾರ ನೀಡಿ ನೆರವಾಗಬೇಕಾದ ಸಂದರ್ಭ ಇದಾಗಿದೆ. ಹಾಗಾಗಿ ಆಡಳಿತ ಸಮಿತಿಯು ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯೋನ್ಮುಖರಾಗಬೇಕು ಎಂದು ಸುನ್ನಿ ವಿಧ್ಯಾಭ್ಯಾಸ ಬೋರ್ಡ್ ಅಧ್ಯಕ್ಷ ಸೈಯದ್ ಅಲಿ ಬಾಫಕಿ ತಂಙಳ್, ಪ್ರಧಾನ ಕಾರ್ಯದರ್ಶಿ ಎ.ಪಿ. ಅಬೂಬಕರ್ ಮುಸ್ಲಿಯಾರ್ ಕಾಂತಪುರಂ, ಸುನ್ನಿ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯಾಧ್ಯಕ್ಷ ಆತೂರು ಸಅದ್ ಮುಸ್ಲಿಯಾರ್ ಮತ್ತು ಪ್ರಧಾನ ಕಾರ್ಯದರ್ಶಿ ಪುಂಡೂರು ಇಬ್ರಾಹಿಂ ಸಖಾಫಿ ಮನವಿ ಮಾಡಿದ್ದಾರೆ.
ರಜಾಕಾಲದಲ್ಲಿ ವಿದ್ಯಾರ್ಥಿಗಳು,ಪೋಷಕರು ಹಾಗೂ ಸಾರ್ವಜನಿಕರಿಗೆ ಧಾರ್ಮಿಕ ಭೋದನೆಗಾಗಿ ಸುನ್ನಿ ವಿದ್ಯಾಭ್ಯಾಸ ಬೋರ್ಡ್ ಮಾ.25ರಿಂದ ಆರಂಭಿಸಿರುವ ‘ಫೀ ರಿಹಾಬಿಲ್ ಕುರ್‌ಆನ್’ ಎಂಬ ಆನ್‌ಲೈನ್ ತರಗತಿಯು ಎಲ್ಲಾ ವಿದ್ಯಾರ್ಥಿಗಳಿಗೆ ಲಭಿಸುವಂತಾಗಲು ಮುಅಲ್ಲಿಮರು ಮತ್ತು ಪೋಷಕರು ಪ್ರತ್ಯೇಕ ಗಮನ ಹರಿಸಬೇಕು. ಪ್ರತಿ ದಿನ ಬೆಳಗ್ಗೆ 8:30 ರಿಂದ 10:30ರವರೆಗೆ ಹಾಗೂ ರಾತ್ರಿ 9:30ಕ್ಕೆ ಮೀಡಿಯ ಮಿಷನ್ ಯೂ ಟ್ಯೂಬ್ ಚಾನೆಲ್ ಮೂಲಕ ತರಗತಿ ಪ್ರಸಾರ ಪಡಿಸಲಾಗುತ್ತದೆ. ಈ ಅವಕಾಶವನ್ನು ಬಳಸಿಕೊಂಡು ಸದುಪಯೋಗ ಪಡಿಸಬೇಕು ಎಂದು ಎಸ್‌ಜೆಎಂ ಕರ್ನಾಟಕ ರಾಜ್ಯಾಧ್ಯಕ್ಷ ಆತೂರ್ ಸಅದ್ ಮುಸ್ಲಿಯಾರ್ ಮನವಿ ಮಾಡಿದ್ದಾರೆ.







