ಕೊರೋನ ವೈರಸ್ ಸೋಂಕಿತ 250 ಭಾರತೀಯರು ಇರಾನಿನಲ್ಲಿ ಅತಂತ್ರ
ಸುಪ್ರೀಂಗೆ ಕೇಂದ್ರದ ಮಾಹಿತಿ
ಹೊಸದಿಲ್ಲಿ, ಎ.1: ಇರಾನಿನ ಕೋಮ್‌ನಲ್ಲಿ ಸಿಕ್ಕಿಹಾಕಿಕೊಂಡಿರುವ 250 ಭಾರತೀಯ ಯಾತ್ರಿಗಳು ಕೊರೋನ ವೈರಸ್ ಸೋಂಕಿಗೆ ತುತ್ತಾಗಿರುವುದು ದೃಢಪಟ್ಟಿದೆ ಮತ್ತು ಅವರನ್ನು ಅಲ್ಲಿಂದ ತೆರವುಗೊಳಿಸಲಾಗಿಲ್ಲ,ಇತರ 500ಕ್ಕೂ ಅಧಿಕ ಯಾತ್ರಿಗಳನ್ನು ಈಗಾಗಲೇ ಭಾರತಕ್ಕೆ ಮರಳಿ ಕರೆತರಲಾಗಿದೆ ಎಂದು ಕೇಂದ್ರವು ಬುಧವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ.
ಕಳೆದ ವರ್ಷದ ಡಿಸೆಂಬರ್‌ನಲ್ಲಿ ಇರಾನಿಗೆ ತೆರಳಿದ್ದ ಸುಮಾರು 1,000 ಯಾತ್ರಾರ್ಥಿಗಳ ಪೈಕಿ ತನ್ನ ಕೆಲವು ಸಂಬಂಧಿಗಳು ಸೇರಿದಂತೆ 250 ಜನರು ಆ ರಾಷ್ಟ್ರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಮತ್ತು ಅವರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಸರಕಾರಕ್ಕೆ ನಿರ್ದೇಶ ನೀಡಬೇಕು ಎಂದು ಕೋರಿ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ನಿವಾಸಿ ಮುಸ್ತಫಾ ಎಂ.ಎಚ್. ಎನ್ನುವವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ ಮತ್ತು ಎಂ.ಆರ್.ಶಾಹ್ ಅವರ ಪೀಠವು,ಪರಿಸ್ಥಿತಿಯ ಮೇಲೆ ನಿರಂತರ ನಿಗಾಯಿರಿಸುವಂತೆ ಮತ್ತು ಇರಾನಿನಲ್ಲಿ ಸಿಕ್ಕಿಹಾಕಿಕೊಂಡಿರುವ ಭಾರತೀಯರ ಸಂಪರ್ಕದಲ್ಲಿರುವಂತೆ ಭಾರತೀಯ ರಾಯಭಾರಿ ಕಚೇರಿಗೆ ಸೂಚಿಸುವುದಾಗಿ ತಿಳಿಸಿತು.
ತಾನು ಅರ್ಜಿದಾರರ ಪರ ಆದೇಶ ಹೊರಡಿಸುವುದಾಗಿ ಹೇಳಿದ ಪೀಠವು, ಇರಾನಿನಲ್ಲಿ ಅತಂತ್ರರಾಗಿರುವವರನ್ನು ಹೊಸದಾಗಿ ವೈದ್ಯಕೀಯ ಪರೀಕ್ಷೆಗೊಳಪಡಿಸುವಂತೆ ಮತ್ತು ಅವರನ್ನು ಸ್ವದೇಶಕ್ಕೆ ವಾಪಸ್ ಕರೆತರುವ ಸಾಧ್ಯತೆಯ ಬಗ್ಗೆ ಪರಿಶೀಲಿಸುವಂತೆಯೂ ತಾನು ರಾಯಭಾರಿ ಕಚೇರಿಗೆ ತಿಳಿಸುವುದಾಗಿ ಹೇಳಿತು. ಸರಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದೆ ಎಂದೂ ಅದು ಅಭಿಪ್ರಾಯಿಸಿತು.
ಸದ್ಯ ಎಲ್ಲ ಅಂತರರಾಷ್ಟ್ರೀಯ ವಿಮಾನಯಾನಗಳು ಸ್ಥಗಿತಗೊಂಡಿವೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನಿರ್ಧಾರಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು,ಇರಾನಿನಲ್ಲಿರುವ ಭಾರತೀಯ ರಾಯಭಾರಿ ಕಚೇರಿಯು ಅಲ್ಲಿ ಸಿಕ್ಕಿಹಾಕಿಕೊಂಡಿರುವ 250 ಜನರ ಸಂಪರ್ಕದಲ್ಲಿದೆ. ಸಾಧ್ಯವಾದಾಗ ಅವರನ್ನು ಮರಳಿ ಕರೆತರಲಾಗುವುದು ಎಂದು ಹೇಳಿದರು.
ಇದಕ್ಕೆ ಒಪ್ಪಿದ ಪೀಠವು,ಇರಾನಿನಲ್ಲಿ ಅತಂತ್ರರಾಗಿರುವವರ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತಿದೆ ಮತ್ತು ಈಗ ಈ ವಿಷಯವನ್ನು ಸರಕಾರದ ಪಾಲಿಗೆ ಬಿಡಬೇಕು ಎಂದು ಅರ್ಜಿದಾರರ ಪರ ವಕೀಲ ಸಂಜಯ ಹೆಗ್ಡೆ ಅವರಿಗೆ ತಿಳಿಸಿತು. ಅಗತ್ಯವಾದಾಗ ನೀವು ಈ ವಿಷಯವನ್ನು ಮತ್ತೆ ಎತ್ತಬಹುದು ಎಂದು ಅದು ಸೂಚಿಸಿತು.