ಇಸ್ರೇಲ್ ನ ಆರೋಗ್ಯ ಸಚಿವರಿಗೆ ಕೊರೋನ ವೈರಸ್ ಸೋಂಕು ದೃಢ

ಜೆರುಸಲೇಂ : ಇಸ್ರೇಲ್ ಆರೋಗ್ಯ ಸಚಿವ ಯಾಕೊವ್ ಲಿಟ್ಝ್ ಮ್ಯಾನ್ ಅವರಿಗೆ ಕೊರೋನ ಸೋಂಕು ತಗಲಿದೆ ಎಂದು ಆರೋಗ್ಯ ಸಚಿವಾಲಯ ಗುರುವಾರ ಘೋಷಿಸಿದೆ.
ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ದೇಶದ ಇತರ ಹಿರಿಯ ಅಧಿಕಾರಿಗಳೊಡನೆ ಅವರು ಸದಾ ನಿಕಟ ಸಂಪರ್ಕದಲ್ಲಿದ್ದವರಾಗಿರುವುದರಿಂದ ಕೊರೋನ ಪಾಸಿಟಿವ್ ಆಗಿರುವುದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಆರೋಗ್ಯ ಸಚಿವರ ಪತ್ನಿಗೆ ಕೂಡ ಸೋಂಕು ತಗಲಿದ್ದು ಇಬ್ಬರನ್ನೂ ಐಸೊಲೇಶನ್ ನಲ್ಲಿರಿಸಲಾಗಿದ್ದು ಇಬ್ಬರೂ ಆರೋಗ್ಯದಿಂದಿದ್ದಾರೆಂದು ಸಚಿವಾಲಯ ತಿಳಿಸಿದೆ.
ಕಳೆದೆರಡು ವಾರಗಳಿಂದ ಅವರ ಜತೆ ಸಂಪರ್ಕದಲ್ಲಿದ್ದವರನ್ನು ಕ್ವಾರಂಟೈನ್ ಗೊಳಗಾಗಲು ಹೇಳಲಾಗುವುದು ಎಂದೂ ಸಚಿವಾಲಯ ಹೇಳಿದೆ. ಈಗಾಗಲೇ ಇಸ್ರೇಲ್ ನ ಮೊಸ್ಸಾದ್ ಗುಪ್ತಚರ ಸಂಸ್ಥೆಯ ಮುಖ್ಯಸ್ಥ ಹಾಗೂ ರಾಷ್ಟ್ರೀಯ ಭದ್ರತಾ ಮಂಡಳಿಯ ಮುಖ್ಯಸ್ಥರನ್ನು ಕ್ವಾರಂಟೈನ್ ಗೊಳಗಾಗಲು ತಿಳಿಸಲಾಗಿದೆ ಎಂಬ ಮಾಹಿತಿಯಿದೆ.
ಪ್ರಧಾನಿ ನೆತನ್ಯಾಹು ಅವರ ಸಮೀಪವರ್ತಿಯೊಬ್ಬರು ಕೊರೋನ ಪಾಸಿಟಿವ್ ಆದ ನಂತರ ಅವರು ಈಗಾಗಲೇ ಐಸೊಲೇಶನ್ ನಲ್ಲಿದ್ದಾರೆ, ಆದರೆ ಅವರಿಗೆ ಕೊರೋನ ಸೋಂಕು ಇಲ್ಲ ಎಂದು ಪರೀಕ್ಷೆಯಿಂದ ದೃಢಪಟ್ಟಿದೆ.







