ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 82 ಮಂದಿಯ ವರದಿ ನೆಗೆಟಿವ್: ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್

ಕಾರವಾರ, ಎ.3: ಉತ್ತರ ಕನ್ನಡ ಜಿಲ್ಲೆಯಿಂದ ಇದುವರೆಗೆ ಪರೀಕ್ಷೆಗಾಗಿ ಕಳುಹಿಸಲಾಗಿದ್ದ ಕೋವಿಡ್-19 ಶಂಕಿತರ ಗಂಟಲ ದ್ರವದ ವರದಿಗಳಲ್ಲಿ ಇದುವರೆಗೆ ಒಟ್ಟು 82 ಜನರ ವರದಿ ನೆಗೆಟಿವ್ ಬಂದಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅವರು 'ಇದುವರೆಗೆ ಜಿಲ್ಲೆಯ 99 ಮಂದಿ ಶಂಕಿತರ ಗಂಟಲ ದ್ರವವನ್ನು ಸಂಗ್ರಹಿಸಲಾಗಿತ್ತು. ಇವುಗಳಲ್ಲಿ 7 ಮಂದಿಯ ಲಕ್ಷಣಗಳು ಕೋವಿಡ್-19ಗೆ ಸಂಬಂಧಿಸಿರದ ಕಾರಣ ಅಪ್ರೂವಲ್ ಆಗಿರಲಿಲ್ಲ. ಈ ಮೊದಲೇ ಕಳುಹಿಸಿದ್ದ ಒಂದು ಮಾದರಿಯು ಗೈಡ್ಲೈನ್ಸ್ ಪ್ರಕಾರ ಇರದಿದ್ದರಿಂದ ರಿಜೆಕ್ಟ್ ಆಗಿದೆ. ಉಳಿದ 91 ವರದಿಗಳಲ್ಲಿ 8 ಪಾಸಿಟಿವ್ ಬಂದಿದ್ದು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 82 ವರದಿಗಳು ನೆಗೆಟಿವ್ ಬಂದಿವೆ. ಒಂದು ವರದಿ ಮಾತ್ರ ಬರಲು ಬಾಕಿ ಇದೆ. ಜಿಲ್ಲೆಯಲ್ಲಿ ಕಂಡು ಬಂದ ಹೆಚ್ಚಿನ ಶಂಕಿತರಲ್ಲಿ ಕೋವಿಡ್-19 ನೆಗೆಟಿವ್ ಬಂದಿರುವುದರಿಂದ ಹೆಚ್ಚಿನ ಆತಂಕ ದೂರವಾದಂತಾಗಿದೆ ಎಂದು ತಿಳಿಸಿದ್ದಾರೆ.
"ಕೋವಿಡ್-19 ವೈರಸ್ ಸೋಂಕಿಗೆ ತುತ್ತಾಗಿ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರನ್ನು ಕಾರವಾರದ ಐಎನ್ಎಸ್ ಪತಂಜಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿಗೆ ತುತ್ತಾದ 6 ಮಂದಿಯನ್ನು ಈ ಮೊದಲು ಪತಂಜಲಿ ಆಸ್ಪತ್ರೆಗೆ ಸಾಗಿಸಲಾಗಿತ್ತು. ಇದೀಗ ಉಳಿದ ಎರಡು ಸೋಂಕಿತರನ್ನೂ ಅದೇ ಅಸ್ಪತ್ರಗೆ ರವಾನಿಸಲಾಗಿದ್ದು, ಎಲ್ಲ 8 ಮಂದಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲ 8 ಸೋಂಕಿತರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಆರೋಗ್ಯ ಸ್ಥಿರವಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶ್ ಕುಮಾರ್ ತಿಳಿಸಿದ್ದಾರೆ.







