ಫ್ಯಾಕ್ಟ್ ಚೆಕ್: 'ನಿಝಾಮುದ್ದೀನ್ ಮಸೀದಿಯಲ್ಲಿ ಸಾಮೂಹಿಕವಾಗಿ ಸೀನುತ್ತಿದ್ದಾರೆ' ಎಂಬ ವೀಡಿಯೋದ ಅಸಲಿಯತ್ತೇನು?
ಇಲ್ಲಿದೆ ಸಂಪೂರ್ಣ ವಿವರ

ಹೊಸದಿಲ್ಲಿ: ದಿಲ್ಲಿಯ ಹಝ್ರತ್ ನಿಝಾಮುದ್ದೀನ್ ಮಸೀದಿಯಲ್ಲಿ ಜನರು ಕೊರೋನ ವೈರಸ್ ಹರಡುವ ಉದ್ದೇಶದಿಂದ ಸಾಮೂಹಿಕವಾಗಿ ಸೀನಿದ್ದಾರೆ ಎಂದು ವೀಡಿಯೋವೊಂದನ್ನು ವೈರಲ್ ಮಾಡಲಾಗುತ್ತಿದೆ. ಫೇಸ್ ಬುಕ್ ಹಾಗೂ ಟ್ವಿಟ್ಟರ್ ನಲ್ಲಿ ಈ ವೀಡಿಯೋ ಒಂದು ರೀತಿಯ ಸಂಚಲನವನ್ನೇ ಸೃಷ್ಟಿಸಿದೆ. ಆದರೆ ಈ ವೀಡಿಯೋ ಹಿಂದಿನ ಅಸಲಿಯತ್ತನ್ನು altnews.in ಅನಾವರಣಗೊಳಿಸಿದೆ.
ಈ ನಿರ್ದಿಷ್ಟ ವೀಡಿಯೋ ಪಾಕಿಸ್ತಾನದ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೆಯೇ ಹರಿದಾಡಿತ್ತು. ಜನವರಿ 30ರಂದು ಒಂದು ಟ್ವೀಟ್ ನಲ್ಲಿ ಅದನ್ನು ಪೋಸ್ಟ್ ಮಾಡಲಾಗಿದ್ದರೆ ಅಲ್ಲಿನ ಯುಟ್ಯೂಬ್ ಚಾನೆಲ್ ಒಂದು ಅದನ್ನು ಜನವರಿ 29ರಂದೇ ಅಪ್ ಲೋಡ್ ಮಾಡಿತ್ತು. ಈ ವೀಡಿಯೋದ ಮೂಲವನ್ನು altnews.inಗೆ ಪತ್ತೆ ಹಚ್ಚಲು ಸಾಧ್ಯವಾಗಿಲ್ಲ, ಆದುದರಿಂದ ಇದು ಹಳೆಯ ವೀಡಿಯೋ ಆಗಿರಬೇಕೆಂದು ಊಹಿಸಲಾಗಿದೆ.
altnews.in ರಿವರ್ಸ್ ಇಮೇಜ್ ಸರ್ಚ್ ಮಾಡಿದಾಗ ಮಾರ್ಚ್ 4ರ ಉರ್ದು ಭಾಷೆಯ ಟ್ವೀಟ್ ಒಂದು ಕಂಡು ಬಂತು ಅದನ್ನು ಅನುವಾದಿಸಿದಾಗ 'ಸೂಫಿ ಹುಚ್ಚಾಟ' ಎಂಬ ಅರ್ಥ ನೀಡುತ್ತದೆ.
ವೀಡಿಯೋವನ್ನು altnews.in ಮತ್ತಷ್ಟು ಪರಾಮರ್ಶಿಸಿ ಜನರು ಈ ರೀತಿ ಸಾಮೂಹಿಕವಾಗಿ ಸೀನುವುದು ಅಸಾಧ್ಯ ಎಂದು ಕಂಡುಕೊಂಡಿದೆ. ವಾಸ್ತವವಾಗಿ ಅವರು ಜೋರಾಗಿ ಉಸಿರೆಳೆದುಕೊಂಡು ಹೊರಕ್ಕೆ ಬಿಡುತ್ತಿರಬೇಕೆಂದು ಅಂದಾಜಿಸಬಹುದಾಗಿದೆ. ಇದನ್ನೇ ಆಧಾರವಾಗಿಸಿ `ಸೂಫಿ ಬ್ರೀದಿಂಗ್' ಎಂಬ ಕೀವರ್ಡ್ ಬಳಸಿ ಗೂಗಲ್ ಸರ್ಚ್ ಮಾಡಿದಾಗ `ಝಿಕ್ರ್' ಎಂಬ ಪದ ಉಲ್ಲೇಖಿಸುವ ಹಲವು ವೀಡಿಯೋಗಳು ಕಂಡು ಬಂದವು.
ಸೂಫಿ ಸಂಘಟನೆ ಅನ್ಸಾರಿ ಖಾದಿರಿ ರಿಫಾಯಿ ತರೀಖಾ ಇದರ ವೆಬ್ ಸೈಟ್ ನಲ್ಲಿ ಝಿಕ್ರ್ ಎಂಬುದು ಭಕ್ತರು ಒಗ್ಗೂಡಿ ದೇವರನ್ನು ನೆನೆಯುವ ಪದ್ಧತಿ ಎಂದು ವಿವರಿಸಲಾಗಿದೆ. ಇದರ ಭಾಗವಾಗಿ ಅಲ್ಲಾಹ್ ಹೆಸರನ್ನು ಹಲವಾರು ಬಾರಿ ಅಥವಾ ನೂರಾರು ಬಾರಿ ಒಂದಾಗಿ ಹೇಳುವುದು ಅಥವಾ ಕೆಲವೊಂದು ಚಲನೆಗಳನ್ನು ಒಟ್ಟಾಗಿ ಮಾಡುವುದು'' ಎಂದು ವಿವರಿಸಲಾಗಿದೆ.
ವೈರಲ್ ವೀಡಿಯೋದಲ್ಲಿ ಜನರು ಅಲ್ಲಾಹ್ ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಇಯರ್ ಫೋನ್ ಸಿಕ್ಕಿಸಿ ಆಡಿಯೋವನ್ನು 40 ಸೆಕೆಂಡ್ ಅವಧಿ ಮುಗಿದ ನಂತರ ಕೇಳಿದರೆ ಅಲ್ಲಾಹ್ ಪದಗಳು ಕೇಳಬಹುದು. ಆದುದರಿಂದ ಸೂಫಿ ಪದ್ಧತಿಯನ್ನು ಜನರು ಆಚರಿಸುತ್ತಿರುವ ಹಳೆಯ ವೀಡಿಯೋವನ್ನು ಬಳಸಿ ನಿಝಾಮುದ್ದೀನ್ ಮರ್ಕಝ್ ನಲ್ಲಿ ಉದ್ದೇಶಪೂರ್ವಕವಾಗಿ ಸೀನುವುದರ ಮೂಲಕ ಕೊರೋನ ವೈರಸ್ ಹರಡುತ್ತಿದ್ದಾರೆಂದು ಈ ವಿಡಿಯೋ ಮೂಲಕ ಸುಳ್ಳನ್ನು ಹರಡಲಾಗುತ್ತಿದೆ.
#NizamuddinIdiots they are not idiots like Kanika Kapoor they have hidden agenda What are they practicing here pic.twitter.com/8dPOswu1JS
— nithin (@nithin42349592) April 1, 2020







