ಶಿವಮೊಗ್ಗ: ಲಾಕ್ಡೌನ್ ಉಲ್ಲಂಘಿಸಿ ಸಾಮೂಹಿಕ ನಮಾಝ್; 70 ಮಂದಿಗೆ ಕ್ವಾರಂಟೈನ್

ಶಿವಮೊಗ್ಗ, ಎ.3: ಲಾಕ್ ಡೌನ್ ಆದೇಶ ಉಲ್ಲಂಘಿಸಿ ಮಸೀದಿಯೊಂದರಲ್ಲಿ ನಮಾಝ್ ಮಾಡುತ್ತಿದ್ದ 77 ಮಂದಿಯನ್ನು ಪೊಲೀಸರು ವಶಕ್ಕೆ ಪಡೆದು, ಕ್ವಾರಂಟೈನ್ ನಲ್ಲಿ ಇರಿಸಿದ ಘಟನೆ ನಡೆದಿದ್ದು, ನಮಾಝ್ ನಲ್ಲಿ ಭಾಗಿಯಾದವರ ಪೈಕಿ ಏಳು ಮಂದಿಯಲ್ಲಿ ಜ್ವರದ ಲಕ್ಷಣ ಇರುವುದು ಬೆಳಕಿಗೆ ಬಂದಿದೆ.
ಆಯನೂರು ಸಮೀಪದ ಕೆಸವಿನಕಟ್ಟೆ ಗ್ರಾಮದಲ್ಲಿ ಘಟನೆ ನಡೆದಿದೆ. ಶುಕ್ರವಾರದ ನಮಾಝ್ ಮಾಡಲು 70ಕ್ಕೂ ಹೆಚ್ಚು ಮಂದಿ ಸೇರಿದ್ದಾರೆ ಎಂದು ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಪ್ರಾರ್ಥನೆಯಲ್ಲಿ ತೊಡಗಿದ್ದವರನ್ನು ಲಾಕ್ ಮಾಡಿದರು. ಕೂಡಲೇ ವೈದ್ಯರನ್ನು ಸ್ಥಳಕ್ಕೆ ಕರೆಸಿ ಆರೋಗ್ಯ ತಪಾಸಣೆ ನಡೆಸಿದರು. ಈ ವೇಳೆ ಏಳು ಮಂದಿಗೆ ಜ್ವರದ ಲಕ್ಷಣ ಇರುವುದು ಪತ್ತೆಯಾಗಿದೆ.
ಎಲ್ಲರಿಗೂ ಕ್ವಾರಂಟೈನ್
ಜ್ವರದ ಲಕ್ಷಣ ಕಂಡು ಬಂದ ಏಳು ಮಂದಿಯನ್ನು ಕೂಡಲೇ ಆಂಬುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಯಿತು. ಉಳಿದ 70 ಮಂದಿಯನ್ನು ಸಮೀಪದ ಶಾಲೆಯೊಂದರ ಕಟ್ಟಡದಲ್ಲಿ ಕ್ವಾರಂಟೈನ್ ವಿಭಾಗದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಕುಂಸಿ ಠಾಣೆ ಸಬ್ ಇನ್ಸ್ ಪೆಕ್ಟರ್ ನವೀನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.








