ಕೊರೋನ ವೈರಸ್: ಭಾರೀ ಚರ್ಚೆಗೆ ಕಾರಣವಾದ ಮೋದಿಯ ‘ದೀಪ ಅಭಿಯಾನ’

ಹೊಸದಿಲ್ಲಿ, ಎ.3: ದೇಶಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚುತ್ತಿರುವ ಕೊರೋನ ವೈರಸ್ ವಿರುದ್ಧದ ಏಕತೆಯಿಂದ ಹೋರಾಡುವ ಸಂಕೇತವಾಗಿ ಎಪ್ರಿಲ್ 5 ರಂದು ರಾತ್ರಿ 9 ಗಂಟೆಗೆ ಜನರು ದೀಪ ಉರಿಸಬೇಕೆಂದು ಕರೆ ನೀಡಿರುವುದು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪ್ರಧಾನಿ ಮೋದಿ ಇಂದು ಬೆಳಗ್ಗೆ ರಾಷ್ಟ್ರದ ಜನತೆಗೆ ನೀಡಿದ ಸಂದೇಶವೊಂದರಲ್ಲಿ ಎಪ್ರಿಲ್ 5ರಂದು ಎಲ್ಲಾ ಭಾರತೀಯರು ತಮ್ಮ ಮನೆಯ ವಿದ್ಯುತ್‌ದೀಪಗಳನ್ನು ಆರಿಸಬೇಕು ಮತ್ತು ಮನೆಯ ಮುಂಭಾಗದಲ್ಲಿ ಅಥವಾ ಬಾಲ್ಕನಿಯಲ್ಲಿ ಹಣತೆಗಳು, ಮೊಂಬತ್ತಿಗಳನ್ನು ಉರಿಸಬೇಕು ಇಲ್ಲವೇ ಟಾರ್ಚ್‌ಗಳು ಹಾಗೂ ಮೊಬೈಲ್ ಫೋನ್ ಫ್ಲ್ಯಾಶ್‌ಲೈಟ್‌ಗಳನ್ನು ಬೆಳಗಿಸಬೇಕೆಂದು ಕರೆ ನೀಡಿದ್ದರು.
ಆದಾಗ್ಯೂ ಮೋದಿ ಆದಿತ್ಯವಾರ ರಾತ್ರಿಯಂದು 9 ಗಂಟೆಗೆ 9 ನಿಮಿಷಗಳ ಕಾಲ ದೀಪವನ್ನು ಉರಿಸುವಂತೆ ಯಾಕೆ ಹೇಳಿದ್ದಾರೆಂಬ ಬಗ್ಗೆ ವ್ಯಾಪಕ ಚರ್ಚೆಗಳು ಆರಂಭವಾಗಿವೆ. 9 ದಿನಗಳ ಚೈತ್ರ ನವರಾತ್ರಿ ಉತ್ಸವು ಈಗಷ್ಟೇ ಕೊನೆಗೊಂಡಿರುವುದು ಇದಕ್ಕೆ ಕಾರಣವಾಗಿದೆ. ಹಲವಾರು ಹಿಂದೂ ಪುರಾಣ ಪರಂಪರೆಗಳಲ್ಲಿ 9 ಸಂಖ್ಯೆಯನ್ನು ಶುಭವೆಂದು ಪರಿಗಣಿಸಲಾಗುತ್ತದೆ.
ಕೊರೋನಾ ವೈರಸ್ ಸೋಂಕಿನ ವಿರುದ್ಧ ಪ್ರಧಾನಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಮೂರನೆ ಭಾಷಣ ಇದಾಗಿದೆ. ಆದರೆ, ಈ ಮೂರು ಭಾಷಣಗಳಲ್ಲಿಯೂ ಈ ಮಹಾಪಿಡುಗನ್ನು ಮಟ್ಟಹಾಕಲು ತನ್ನ ಸರಕಾರ ಕೈಗೊಂಡಿರುವ ವೈದ್ಯಕೀಯ ಹಾಗೂ ಆರ್ಥಿಕ ಕ್ರಮಗಳ ಬಗ್ಗೆ ಅವರು ಯಾವುದೇ ಉಲ್ಲೇಖವನ್ನು ಮಾಡದಿರುವ ಬಗ್ಗೆ ತಜ್ಞರು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಕೊರೋನ ವೈರಸ್ ರೋಗಿಗಳ ಚಿಕಿತ್ಸೆಯಲ್ಲಿ ನಿರತರಾದ ವೈದ್ಯರು ತಮಗೆ ಸುರಕ್ಷತಾ ಉಡುಪುಗಳ ಕೊರತೆಯಿರುವ ಬಗ್ಗೆ ಪ್ರತಿಭಟನೆ ನಡೆಸುತ್ತಿದ್ದಾರೆ. ಜೊತೆಗೆ ಈ ಮಾರಕ ರೋಗದ ವಿರುದ್ಧ ಹೋರಾಟದಲ್ಲಿ ಸರಕಾರದ ಪಾರದರ್ಶಕೆಯ ಕೊರತೆಯ ಬಗ್ಗೆಯೂ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿವೆ. ಈ ನಡುವೆ ಪ್ರಧಾನಿ 9 ನಿಮಿಷಗಳ ಬೆಳಕಿನ ಪ್ರದರ್ಶನಕ್ಕೆ ಕರೆ ನೀಡಿರುವುದು ಜನರನ್ನು ಗೊಂದಲದಲ್ಲಿ ಕೆಡವಿದೆಯೆಂದು ಕೆಲವರು ವಿಶ್ಲೇಷಿಸಿದ್ದಾರೆ.
ಪ್ರಧಾನಿಯವರ ಶುಕ್ರವಾರದ ವಿಡಿಯೋ ಸಂದೇಶಕ್ಕೆ ಪ್ರಗತಿಪರ ವೈದ್ಯರು ಹಾಗೂ ವಿಜ್ಞಾನಿಗಳ ವೇದಿಕೆಯ ರಾಷ್ಟ್ರೀಯ ಸಂಚಾಲಕ ಡಾ. ಹರ್‌ಜಿತ್ ಸಿಂಗ್ ಭಟ್ಟಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಕೋವಿಡ್-19 ಪಿಡುಗಿನ ಗಂಭೀರತೆಯ ಬಗ್ಗೆ ಅರಿವಿಲ್ಲದಂತಹ ಶೋ ಮ್ಯಾನ್ ಒಬ್ಬಾತ ನಮ್ಮನ್ನು ಈ ಬಿಕ್ಕಟ್ಟಿನ ಸಂದರ್ಭದಲ್ಲ್ಲಿ ಮುನ್ನಡೆಸುತ್ತಿದ್ದಾರೆ ಜನರನ್ನು ಮತ್ತೆಮತ್ತೆ ಸಂಭ್ರಮಾಚರಣೆಗಳು ಹಾಗೂ ಸಂಭಾವ್ಯ ಸಾಮೂಹಿಕ ಸಭೆಗಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತಿದ್ದಾರೆ’’. ಆದಾಗ್ಯೂ, ಒಂದೇ ವೇಳೆ ನೀವು ಮೊಂಬತ್ತಿಗಳು ಅಥವಾ ಟಾರ್ಚ್‌ಲೈಟ್‌ಗಳನ್ನು ಬೆಳಗುವಿರಾದರೆ, ಯಾವುದೇ ಸುರಕ್ಷತಾ ಸಾಧನಗಳಿಲ್ಲದೆ ದಿನರಾತ್ರಿ ಕೊರೋನ ವೈರಸ್ ರೋಗಿಗಳ ಉಪಚಾರದಲ್ಲಿ ತೊಡಗಿರುವ ವೈದ್ಯಕೀಯ ಸಿಬ್ಬಂದಿಗಾಗಿ ಪ್ರಾರ್ಥಿಸಿ. ಅವರು ಈ ಮಹಾ ಸೋಂಕು ರೋಗದ ಹಾವಳಿಯಲ್ಲಿ ತಮ್ಮ ಪ್ರಾಣವನ್ನೇ ಕಳೆದುಕೊಳ್ಳಬಹುದಾಗಿದೆ. ಅವರಿಗೂ ಕುಟುಂಬಗಳಿವೆ. ಆದರೆ ಯಾರೂ ಕೂಡಾ ಅವರ ಬಗ್ಗೆ ಕಾಳಜಿ ವಹಿಸುತ್ತಿಲ್ಲ.’’
ಡಾ.ಹರ್‌ಜಿತ್ ಸಿಂಗ್ | ವೈದ್ಯರು ಹಾಗೂ ವಿಜ್ಞಾನಿಗಳ ವೇದಿಕೆಯ ರಾಷ್ಟ್ರೀಯ ಸಂಚಾಲಕ







