ಲಾಕ್‍ಡೌನ್ ಎಫೆಕ್ಟ್: ಕಾರ್ಮಿಕರು-ನಿರಾಶ್ರಿತರಿಗೆ ನಿತ್ಯ ತೊಡುವ ಬಟ್ಟೆಗಳ ಸಮಸ್ಯೆ
ಬೆಂಗಳೂರು, ಎ.4: ಲಾಕ್‍ಡೌನ್ ಪರಿಣಾಮದಿಂದ ತುತ್ತು ಅನ್ನಕ್ಕೂ ಪರಿತಪಿಸಿ ಬಿಬಿಎಂಪಿ ಆರಂಭಿಸಿರುವ ಕೇಂದ್ರಗಳಲ್ಲಿ ನೆಲೆಸಿರುವ ವಲಸೆ ಕಾರ್ಮಿಕರು-ನಿರಾಶ್ರಿತರಿಗೆ ನಿತ್ಯ ತೊಡುವ ಬಟ್ಟೆಗಳ ಸಮಸ್ಯೆ ಎದುರಾಗಿದೆ.
ಹರಿದ ಚಿಂದಿಯಾಗಿರುವ ತೊಟ್ಟ ಬಟ್ಟೆಯಲ್ಲೇ ದಿನ ದೂಡುವಂತಾಗಿದೆ. ಲೌಕ್‍ಡೌನ್ ಕಾರ್ಮಿಕರು ಹಾಗೂ ನಿರಾಶ್ರಿತರ ಮೇಲೆ ನೇರ ಪರಿಣಾಮ ಬೀರಿದ್ದು, ಅಂದು ದುಡಿದ ಹಣದಲ್ಲೇ ಜೀವನ ಸಾಗಿಸುತ್ತಿದ್ದವರ ಬದುಕು ಸಂಪೂರ್ಣ ಬೀದಿಗೆ ಬಂದಿತ್ತು. ಒಪ್ಪೊತ್ತಿನ ಊಟಕ್ಕೂ ಪರಿತಪಿಸಬೇಕಾಗಿತ್ತು. ಇದೀಗ ಬಿಬಿಎಂಪಿ ಹಾಗೂ ಜಿಲ್ಲಾಡಳಿತ 200ಕ್ಕೂ ಹೆಚ್ಚು ತಾತ್ಕಾಲಿಕವಾಗಿ ಆಶ್ರಯ ಕೇಂದ್ರಗಳನ್ನು ಆರಂಭಿಸಿ ಅವರೆಲ್ಲರಿಗೂ ವಸತಿ ವ್ಯವಸ್ಥೆ ಕಲ್ಪಿಸಿದ್ದು, ಅಲ್ಲಿ ಉಪಾಹಾರ, ಎರಡೊತ್ತು ಆಹಾರ ಕಲ್ಪಿಸಲಾಗುತ್ತಿದೆ.
ಕಳೆದ ಮಾ.25ರಂದು ಆರಂಭವಾದ ಈ ಕೇಂದ್ರದಲ್ಲಿ ಸುಮಾರು ನಿರಾಶ್ರಿತರಿಗೆ ಆಶ್ರಯ ನೀಡಲಾಗಿದ್ದು, ಸ್ಥಳೀಯ ಸಂಘ-ಸಂಸ್ಥೆಗಳು ನಿತ್ಯವೂ ಆಹಾರ ಸೇರಿದಂತೆ ಇನ್ನಿತರ ಅಗತ್ಯ ವಸ್ತುಗಳನ್ನು ಪೂರೈಸುತ್ತಿದ್ದಾರೆ.
ಮಾ.29ರಿಂದ ವಲಸೆ ಹಾಗೂ ಕೂಲಿ ಕಾರ್ಮಿಕರಿಗೂ ಕೇಂದ್ರಗಳನ್ನು ಆರಂಭಿಸಲಾಗಿದ್ದು, 200 ಕೇಂದ್ರಗಳಲ್ಲಿ 20 ಸಾವಿರಕ್ಕೂ ಅಧಿಕ ಕಾರ್ಮಿಕರು ಹಾಗೂ ನಿರಾಶ್ರಿತರಿ ಆಶ್ರಯ ಪಡೆದುಕೊಂಡಿದ್ದಾರೆ. ಜಿಲ್ಲೆಯಲ್ಲಿ ಆಶ್ರಯ ಪಡೆಯುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಇಸ್ಕಾನ್‍ನ ಅಕ್ಷಯ ಪಾತ್ರೆಯಿಂದ ಉಪಾಹಾರ ಹಾಗೂ ಊಟದ ವ್ಯವಸ್ಥೆ ಮಾಡಲಾಗುತ್ತಿದೆ.
ಆಶ್ರಯ ಮತ್ತು ಆಹಾರದೊಂದಿಗೆ ಸ್ವಚ್ಛತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಬಿಬಿಎಂಪಿ ಒಂದು ಟವೆಲ್, ಬಟ್ಟೆ ಹಾಗೂ ಮೈ ಸಾಬೂನು, ಟೂತ್ ಪೇಸ್ಟ್, ಬ್ರಶ್ ಇರುವ ಕಿಟ್ ನೀಡುತ್ತಿದೆ. ಆದರೆ ಆಶ್ರಯ ಪಡೆದ ಕಾರ್ಮಿಕರಿಗೆ ದಿನನಿತ್ಯ ಧರಿಸುವ ಬಟ್ಟೆಗಳದ್ದೇ ಸಮಸ್ಯೆಯಾಗಿ ಪರಿಣಮಿಸಿದ್ದು, ದಿನ ಕಳೆದಂತೆ ಇದು ಮತ್ತಷ್ಟು ಹೆಚ್ಚಲಿದೆ.
ದಾನಿಗಳಿಂದ ನಿರೀಕ್ಷೆ: ತೊಟ್ಟ ಬಟ್ಟೆಯಲ್ಲಿ ಬಂದು ಕೇಂದ್ರಗಳಲ್ಲಿ ಆಶ್ರಯ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ಬೆಳಗ್ಗೆ ತೊಟ್ಟ ಬಟ್ಟೆಯನ್ನು ತೊಳೆದು ಹಾಕಿ ಒಣಗಿದ ಮೇಲೆ ಪುನಃ ಅವುಗಳನ್ನು ಧರಿಸಿ ದಿನ ಕಳೆಯುತ್ತಿದ್ದಾರೆ. ಮಹಿಳೆಯರ ಪಾಡಂತೂ ಹೇಳತೀರದು. ಮಕ್ಕಳಂತೂ ಮಾಸಿದ ಒಂದೇ ಬಟ್ಟೆಯಲ್ಲಿ ಇದ್ದಾರೆ. ಕೇಂದ್ರಗಳಿಗೆ ಸೇರುವ ಮುನ್ನ ಪ್ರತಿಯೊಬ್ಬರ ಆರೋಗ್ಯ ತಪಾಸಣೆ ಮಾಡಲಾಗಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಥರ್ಮಲ್ ಸ್ಕ್ಯಾನಿಂಗ್‍ಗೆ ಒಳಪಡಿಸಿ ಪ್ರತಿಯೊಬ್ಬರ ಮಾಹಿತಿ ಸಂಗ್ರಹಿಸಲಾಗಿದೆ.
ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ತೋರಬೇಕಾಗಿದೆ. ಹೀಗಾಗಿ ಆರೋಗ್ಯ ಇಲಾಖೆಯ ತಂಡ ರಚಿಸಿ ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಪ್ರತಿಯೊಂದು ಕೇಂದ್ರಗಳಿಗೆ ಭೇಟಿ ನೀಡಿ ಆರೋಗ್ಯ ತಪಾಸಣೆ ಮಾಡುವ ಕಡೆಗೆ ಗಮನ ಹರಿಸಬೇಕಾಗಿದೆ.
ಅಗತ್ಯ ಸೌಲಭ್ಯ: ಆಶ್ರಯ ಕೇಂದ್ರಗಳಲ್ಲಿ ಪ್ರಮುಖವಾಗಿ ಅಂತರ ಕಾಯ್ದುಕೊಳ್ಳುವುದಕ್ಕೆ ಪ್ರಮುಖ ಒತ್ತು ನೀಡಲಾಗಿದೆ. ಕಾಲ ಕಾಲಕ್ಕೆ ಉಪಾಹಾರ, ಊಟವನ್ನು ಪ್ಯಾಕೆಟ್ ಮೂಲಕ ವಿತರಿಸಲಾಗುತ್ತಿದೆ. ಅಕ್ಕಿ ಬೇಳೆ, ಸಕ್ಕರೆ, ಉಪ್ಪಿನಕಾಯಿ, ಉಪ್ಪು, ತೆಂಗಿನಕಾಯಿ, ತರಕಾರಿ ಇತ್ಯಾದಿ ವಸ್ತುಗಳನ್ನು ನೀಡಲಾಗುತ್ತಿದೆ.
ಎಷ್ಟೋ ಜನ ಕಾರ್ಮಿಕರು ಬಂದರೂ ವಸತಿ ನೀಡುವಷ್ಟು ಬಿಬಿಎಂಪಿ ತಯಾರಿ ಮಾಡಿಕೊಂಡಿದೆ. ಸದ್ಯದ ಪರಿಸ್ಥಿತಿಯಲ್ಲಿ 200 ಕೇಂದ್ರಗಳನ್ನು ಗುರುತಿಸಲಾಗಿದೆ. 20 ಸಾವಿರಕ್ಕೂ ಹೆಚ್ಚು ಜನರಿಗೆ ಆಶ್ರಯ ಕಲ್ಪಿಸಬಹುದಾಗಿದೆ. ಆಹಾರ, ಆರೋಗ್ಯ, ಆಶ್ರಯಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ಸಮಿತಿ ಕೆಲಸ ಮಾಡುತ್ತಿದೆ.
-ಎಂ. ಲೋಕೇಶ, ಅಧೀಕ್ಷಕ ಅಭಿಯಂತರ, ಯೋಜನೆ ಮತ್ತು ಕೇಂದ್ರ
ಅನ್ನಕ್ಕಾಗಿ ಪರದಾಡುವ, ನಮ್ಮ ಊರಿಗೂ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂತಹ ಸಂದರ್ಭದಲ್ಲಿ ಮೂರೊತ್ತು ಊಟ, ಇರಲು ಆಶ್ರಯ ಕೊಟ್ಟು ಇಡೀ ಕುಟುಂಬಕ್ಕೆ ಅನ್ನ ಹಾಕುತ್ತಿದ್ದಾರೆ. ಊರು ಸೇರಿದರೆ ಸಾಕು ಎನ್ನುವ ಕಾರಣಕ್ಕೆ ತೊಟ್ಟ ಬಟ್ಟೆಯಲ್ಲಿ ಬಂದಿದ್ದೇವೆ. ನನ್ನಂತೆಯೇ ಬಹಳಷ್ಟು ಜನ ಜೀವ ಉಳಿಸಿಕೊಂಡರೆ ಸಾಕು ಎನ್ನುವ ಭಯದಿಂದ ಬಂದಿದ್ದಾರೆ.
–ಕರಿಬಸಪ್ಪ, ಕಾರ್ಮಿಕ







