ಮಂಗಳೂರು: ಜನ-ವಾಹನ ಸಂಚಾರ ವಿರಳ; ವ್ಯಾಪಾರ ಕಡಿಮೆ

ಮಂಗಳೂರು, ಎ. 5: ರವಿವಾರ ಎಂದ ತಕ್ಷಣ ಮಂಗಳೂರು ಗಿಜಿಗುಟ್ಟುತ್ತದೆ. ನಗರದ ಕ್ಲಾಕ್ ಟವರ್‌ನಿಂದ ಹಿಡಿದು ಲೇಡಿಗೋಶನ್ ಆಸ್ಪತ್ರೆಯವರೆಗೆ ‘ಸಂಡೇ ಬಝಾರ್’ ಅಂತೂ ನೋಡಲು ಹಬ್ಬದ ವಾತಾವರಣ ಸೃಷ್ಟಿಸುತ್ತಿತ್ತು. ಹೊರ ಜಿಲ್ಲೆಯಿಂದ ದುಡಿಯುವ ದಿನಗೂಲಿ, ಕೂಲಿ, ವಲಸೆ ಕಾರ್ಮಿಕರನ್ನು ಗುರಿಯಾಗಿಸಿಕೊಂಡು ನಡೆಯುವ ಈ ‘ಸಂಡೆ ಬಝಾರ್’ನ ವ್ಯಾಪಾರದಲ್ಲಿ ಚೌಕಾಸಿಯೇ ಮೇಳೈಸುತ್ತಿತ್ತು. ಆದರೆ, ಮಾ.22ರ ಜನತಾ ಕರ್ಫ್ಯೂ, ಮಾ.29ರ ಸಂಪೂರ್ಣ ಲಾಕ್‌ಡೌನ್‌ನಿಂದ ಸ್ತಬ್ಧಗೊಂಡಿದ್ದ ಮಂಗಳೂರು, ಎ.5ರ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ದಿನಸಿ ಅಂಗಡಿ ವ್ಯಾಪಾರಕ್ಕೆ ಜಿಲ್ಲಾಡಳಿತ ಅವಕಾಶ ಮಾಡಿಕೊಟ್ಟಿದ್ದರೂ ಕೂಡ ನಗರದಲ್ಲಿ ಗ್ರಾಹಕರು ಮತ್ತು ವಾಹನ ಸಂಚಾರ ವಿರಳವಾಗಿತ್ತು. ಇದರಿಂದ ವ್ಯಾಪಾರ ಕೂಡ ಕಡಿಮೆಯಾಗಿತ್ತು.
ನಗರದ ಸೆಂಟ್ರಲ್ ಮಾರ್ಕೆಟ್ ಸಂಪೂರ್ಣ ಬಂದ್ ಆಗಿದೆ. ಸ್ಟೇಟ್‌ಬ್ಯಾಂಕ್ ಸಮೀಪದ ಮೀನು ಮಾರುಕಟ್ಟೆಯು ತೆರೆದಿತ್ತು.ಆದರೆ ಗ್ರಾಹಕರ ಸಂಖ್ಯೆಯು ಅಷ್ಟೇನೂ ಇರಲಿಲ್ಲ. ಮೀನಿನ ದರ ಕೂಡ ದುಬಾರಿಯಾಗಿತ್ತು. ಮೆಡಿಕಲ್ ಸ್ಟೋರ್‌ಗಳಲ್ಲೂ ಜನ ಸಂದಣಿ ಕಂಡು ಬಂದಿಲ್ಲ.
ನಗರದ ಬೃಹತ್ ಮಾಲ್‌ಗಳ ದಿನಸಿ ಶಾಪ್‌ಗಳು ತೆರೆದಿತ್ತು. ಆದರೆ ಅಲ್ಲೂ ಕೂಡ ನಿರೀಕ್ಷಿತ ಜನರಿರಲಿಲ್ಲ. ನಗರದ ಕೆಲವು ಕಡೆ ರಸ್ತೆ ಬದಿ ಹಣ್ಣು ಹಂಪಲು, ತರಕಾರಿ ಮಾರಾಟ ಮಾಡುತ್ತಿದ್ದುದು ಕಂಡು ಬಂತು. ಆದರೆ, ಒಳ್ಳೆಯ ವ್ಯಾಪಾರವಿಲ್ಲ ಎಂದು ವ್ಯಾಪಾರಿಗಳು ಅಳಲು ತೋಡಿಕೊಂಡಿದ್ದಾರೆ.
ನಗರದ ಹಲವು ಕಡೆ ಆಟೋ ರಿಕ್ಷಾಗಳು ಮಧ್ಯಾಹ್ನದ ತನಕ ಬಾಡಿಗೆ ನಡೆಸಿವೆ. ಪಡಿತರ ಹಾಗು ಅಂಗಡಿಗಳಿಂದ ತರಕಾರಿ, ದಿನಸಿ ಸಾಮಗ್ರಿ ಕೊಂಡೊಯ್ಯುವವರಿಗೆ ರಿಕ್ಷಾಗಳು ಸಹಾಯಕವಾಯಿತು. ಪದವಿನಂಗಡಿಯಲ್ಲಿ ಪಾರ್ಕ್‌ನಲ್ಲೇ ರಿಕ್ಷಾಗಳು ನಿಂತು, ಬಾಡಿಗೆ ಮಾಡಿರುವ ಬಗ್ಗೆ ಸ್ಥಳೀಯರು ತಿಳಿಸಿದ್ದಾರೆ.
ಉಳಿದಂತೆ ವಾಹನ ಸಂಚಾರ ಕಡಿಮೆಯಾಗಿತ್ತು. ಆದರೂ ಕೆಲವು ದ್ವಿಚಕ್ರ ಹಾಗೂ ಕಾರುಗಳು ರಸ್ತೆಯಲ್ಲಿ ಓಡಾಟ ನಡೆಸಿದೆ. ಅನಗತ್ಯವಾಗಿ ತಿರುಗಾಡುತ್ತಿದ್ದವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಧ್ಯಾಹ್ನದ ಬಳಿಕ ವಾಹನ ಸಂಚಾರ ಬಹುತೇಕ ಸ್ಥಗಿತಗೊಂಡಿತ್ತು. ಅಂಗಡಿಗಳು ಮಧ್ಯಾಹ್ನ 12 ಗಂಟೆಯಾಗುತ್ತಲೇ ಬಂದ್ ಆಗಿದ್ದವು.
ನಗರದ ನಂತೂರ್, ಕ್ಲಾಕ್‌ಟವರ್, ಲಾಲ್‌ಭಾಗ್, ಅಂಬೇಡ್ಕರ್ ವೃತ್ತ ಮತ್ತಿತರ ಕಡೆ ಪೊಲೀಸರು ತೀವ್ರ ತಪಾಸಣೆ ನಡೆಸಿದರು. ಈ ಮಧ್ಯೆ ದ್ವಿಚಕ್ರ ಸವಾರರು ಹೆಲ್ಮೆಟ್ ಧರಿಸದೆ ಸಂಚರಿಸುತ್ತಿರುವುದು ಹೆಚ್ಚಾಗಿದೆ. ಪೊಲೀಸರು ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.
ಪಡಿತರ ಅಂಗಡಿಗಳಲ್ಲಿ ಸರತಿ ಸಾಲು: ಜಿಲ್ಲೆಯಲ್ಲಿ ಜಿಲ್ಲಾಡಳಿತದ ಆದೇಶದ ಹಿನ್ನೆಲೆಯಲ್ಲಿ ರವಿವಾರವೂ ನ್ಯಾಯಬೆಲೆ ಅಂಗಡಿಗಳಲ್ಲಿ ಪಡಿತರ ಅಕ್ಕಿಯನ್ನು ವಿತರಿಸಲಾಯಿತು. ಬಹುತೇಕ ಕಡೆ ಅಂಗಡಿಗಳ ಮುಂದೆ ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಅಕ್ಕಿ ಖರೀದಿಸಿದರು.







