ಪ್ರಚೋದನಾತ್ಮಕ ಹೇಳಿಕೆ ನೀಡಿದವರ ವಿರುದ್ಧ ಪ್ರಕರಣ ದಾಖಲಿಸಲು ಒತ್ತಾಯ
ಮಂಗಳೂರು, ಎ.6: ಕೊರೋನ ವೈರಸ್ ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿದ್ದು, ಜಾತಿ ಮತ ಭೇದವಿಲ್ಲದೆ ಇದನ್ನು ತಡೆಗಟ್ಟಲು ಎಲ್ಲರೂ ಮುಂಜಾಗ್ರತಾ ಕ್ರಮವಾಗಿ ಸರಕಾರದ ಆದೇಶವನ್ನು ಪಾಲಿಸುತ್ತಿದ್ದಾರೆ. ಈ ಮಧ್ಯೆ ಜಾತಿ, ಧರ್ಮದ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಾತ್ಮಕವಾದ ಬರಹ ಮತ್ತು ಹೇಳಿಕೆಗಳ ಮೂಲಕ ಕೆಲವರು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತಿದ್ದಾರೆ. ಇವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ಪ್ರಕರಣ ದಾಖಲಿಸಬೇಕು ಎಂದು ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ ಒತ್ತಾಯಿಸಿದ್ದಾರೆ.
ಬೆಳ್ಳಾರೆ ಠಾಣೆ ವ್ಯಾಪ್ತಿಯ ಕಾಣಿಯೂರಿನ ಕುಸುಮಾಧರ್ ಎಂಬಾತ ಕೊರೋನಗಿಂತ ಕುರಾನ್ ಭಾರತಕ್ಕೆ ಮಾರಕ ಆಗ್ತಾ ಇದೆ ಎಂದಿದ್ದರೆ, ಸುಬ್ರಹ್ಮಣ್ಯ ಮತ್ತು ಸುಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ಓಂಪ್ರಕಾಶ್ ಸುಳ್ಯ ಮತ್ತು ಸುಚಿನ್ ಗೌಡ ಸುಚಿ ಎಂಬವರು ಫೇಸ್‌ಬುಕ್‌ನಲ್ಲಿ ಪವಿತ್ರ ಗ್ರಂಥ ಕುರ್‌ಆನ್ ಮತ್ತು ಮುಸ್ಲಿಮರನ್ನು ಅವಹೇಳನಕಾರಿಯಾಗಿ ಚಿತ್ರೀಕರಿಸಿ ಪ್ರಚೋದನಕಾರಿ ಸಂದೇಶವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಸಮಾಜದಲ್ಲಿ ಕೋಮು ಪ್ರಚೋದನೆ ನಡೆಸಿದ್ದಾರೆ. ಹಾಗಾಗಿ ಇವರ ವಿರುದ್ಧ ಮತ್ತು ಈ ರೀತಿಯ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವವರ ಮೇಲೆ ಪೊಲೀಸ್ ಇಲಾಖೆ ತಕ್ಷಣ ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಿ ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ.







