ಕೊಡಗಿನ ವಿವಿಧೆಡೆ ಆಲಿಕಲ್ಲು ಮಳೆ: ಚಿಕ್ಕಮಗಳೂರಿನಲ್ಲಿ ಗುಡುಗು ಸಹಿತ ಭಾರೀ ವರ್ಷಧಾರೆ

ಮಡಿಕೇರಿ, ಎ.5: ಹವಾಮಾನ ಇಲಾಖೆಯ ಮುನ್ಸೂಚನೆಯಂತೆ ಕೊಡಗು ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ರವಿವಾರ ಉತ್ತಮ ಮಳೆಯಾಗಿದೆ. ಕೊಡಗು ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಧ್ಯಾಹ್ನ ಆಲಿಕಲ್ಲು ಸಹಿತ ಉತ್ತಮ ಮಳೆಯಾದರೆ, ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಸುರಿದ ಸಾಧಾರಣ ಮಳೆ ರಣಬಿಸಿಲಿನ ತಾಪದಿಂದ ಬಸವಳಿದಿದ್ದ ಜನತೆಗೆ ತಂಪೆರೆಯಿತು.
ಕೊಡಗು
ಜಿಲ್ಲೆಯಲ್ಲಿ ಗುಡುಗು, ಸಿಡಿಲಿನೊಂದಿಗೆ ಗಾಳಿ ಮಳೆಯಾಗಿದ್ದು, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ ಮತ್ತು ಸೋಮವಾರಪೇಟೆ ತಾಲೂಕಿನ ವಿವಿಧೆಡೆ ಮಳೆ ಸುರಿದಿದೆ. ಸುಡುಬಿಸಿಲ ಬೇಗೆಗೆ ತಂಪೆರೆದ ವಾತಾವರಣ ಮೂಡಿದ್ದು, ಕರ್ತವ್ಯ ನಿರತ ಸಂಚಾರಿ ಪೊಲೀಸರು ಮತ್ತು ಗೃಹ ರಕ್ಷಕ ದಳದ ಸಿಬ್ಬಂದಿಗಳು ದಿಢೀರ್ ಮಳೆಯಿಂದ ರಕ್ಷಣೆ ಪಡೆಯಲು ಮುಚ್ಚಿದ್ದ ಅಂಗಡಿ ಮುಂಗಟ್ಟುಗಳ ಆಶ್ರಯ ಪಡೆದರು.
ಮಡಿಕೇರಿ ನಗರದಲ್ಲಿ ಹೆಚ್ಚು ಮಳೆಯಾಗಿದ್ದು, ಗಾಳಿಬೀಡು, ವಣಚಲು, ಸಂಪಾಜೆ, ಕಲ್ಲುಗುಂಡಿ, ಮಕ್ಕಂದೂರು ವ್ಯಾಪ್ತಿಯಲ್ಲಿ ಆಲಿಕಲ್ಲುಗಳು ಬಿದ್ದಿವೆ. ಈ ವಾರ ಮಳೆ ಸುರಿಯುವ ಬಗ್ಗೆ ಗೋಣಿಕೊಪ್ಪದ ಕೃಷಿ ವಿಜ್ಞಾನ ಕೇಂದ್ರದ ಹವಾಮಾನ ವಿಭಾಗದ ತಜ್ಞರು ಮಾಹಿತಿಯನ್ನೂ ನೀಡಿದ್ದರು.
ರಸ್ತೆಗೆ ಬಿದ್ದ ಮರ
ಕಾಟಕೇರಿ, ಮದೆನಾಡು, ಜೋಡುಪಾಲ ವ್ಯಾಪ್ತಿಯಲ್ಲಿ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಜೋಡುಪಾಲ ಮುಖ್ಯ ರಸ್ತೆಯಲ್ಲಿ ಮರ ಬಿದ್ದು ರಸ್ತೆ ಸಂಪರ್ಕಕ್ಕೆ ಕೆಲಕಾಲ ಅಡ್ಡಿಯಾಯಿತು. ಮರ ವಿದ್ಯುತ್ ಕಂಬದ ಮೇಲೆ ಬಿದ್ದು, ವಿದ್ಯುತ್ ವ್ಯತ್ಯಯ ಉಂಟಾದ ಹಿನ್ನೆಲೆ ಚೆಸ್ಕಾಂ ಸಿಬ್ಬಂದಿಗಳು ಹಾಗೂ ಸ್ಥಳೀಯ ಗ್ರಾಮಸ್ಥರು ರಸ್ತೆಗೆ ಅಡ್ಡಲಾಗಿ ಬಿದ್ದ ಮರವನ್ನು ತೆರವುಗೊಳಿಸಿದರು. ಹೆದ್ದಾರಿ ಉದ್ದಕ್ಕೂ ಮರದ ಸಣ್ಣ ಕೊಂಬೆಗಳು, ಒಣಗಿದ ಎಲೆಗಳು ಬಿದ್ದದ್ದು ಕಂಡು ಬಂತು.
ಚಿಕ್ಕಮಗಳೂರು
ಲಾಕ್‍ಡೌನ್ ಮಧ್ಯೆ ರಣಬಿಸಿಲಿನ ತಾಪದಿಂದ ಬಸವಳಿದಿದ್ದ ಜಿಲ್ಲೆಯ ಮಲೆನಾಡು ಭಾಗದ ಜನರಿಗೆ ರವಿವಾರ ಸಂಜೆ ಸುರಿದ ಸಾಧಾರಣ ಮಳೆ ತಂಪಿನ ಸಿಂಚನ ಮೂಡಿಸಿತು. ಗುಡುಗು, ಸಿಡಿಲು, ಗಾಳಿ ಸಹಿತ ಸುರಿದ ಮಳೆ ಮುಂದಿನ ದಿನಗಳಲ್ಲಿ ಮಲೆನಾಡಿನಲ್ಲಿ ಭಾರೀ ಮಳೆಯಾಗುವ ಮನ್ಸೂಚನೆ ನೀಡಿದೆ.
ರವಿವಾರ ಬೆಳಗ್ಗೆಯಿಂದ ಇಡೀ ಜಿಲ್ಲೆಯಲ್ಲಿ ರಣಬಿಸಿಲಿತ್ತು. ಮನೆಯೊಳಗೆ ಬಂಧಿಯಾಗಿರುವ ಸಾರ್ವಜನಿಕರು ಬಿಸಿಲ ಬೇಗೆಗೆ ತತ್ತರಿಸಿದ್ದರು. ಆದರೆ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸಂಜೆ ವೇಳೆ ಧಾರಾಕಾರ ಮಳೆಯಾಗಿದ್ದು, ಜೊತೆಗೆ ಭಾರೀ ಗಾಳಿ, ಗುಡುಗು, ಸಿಡಿಲಿನ ಆರ್ಭಟ ಹೆಚ್ಚಿತ್ತು. ಕೊಪ್ಪ ತಾಲೂಕಿನ ಜಯಪುರ, ಹೇರೂರು, ಬಸರೀಕಟ್ಟೆ, ಕೊಪ್ಪ ಪಟ್ಟಣದಲ್ಲಿ ರವಿವಾರ ಸಾಧಾರಣ ಮಳೆಯಾದರೆ, ಮೂಡಿಗೆರೆ ತಾಲೂಕಿನ ಬಣಕಲ್, ಕೊಟ್ಟಿಗೆಹಾರ, ಕಳಸ, ಬಾಳೂರು ಹಾಗೂ ಎನ್.ಆರ್.ಪುರ, ಶೃಂಗೇರಿ ತಾಲೂಕಿನ ವಿವಿಧೆಡೆ ಸುಮಾರು ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆಯಾದ ಬಗ್ಗೆ ವರದಿಯಾಗಿದೆ. ಇದರಿಂದ ಬಿಸಿಲಿನಿಂದ ತತ್ತರಿಸಿದ್ದ ಸಾರ್ವಜನಿಕರು, ರೈತರಿಗೆ ತಂಪು ನೀಡಿದಂತಾಗಿದೆ. ರವಿವಾರದ ಮಳೆಯಿಂದಾಗಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಕೃಷಿಕರು, ಕಾಫಿ, ಅಡಿಕೆ ಬೆಳೆಗಾರರದ್ದಾಗಿದೆ.






.jpg)
.jpg)


