ಬಾರಕೂರು: ವಲಸೆ ಕಾರ್ಮಿಕರಿಗೆ ಉಪಹಾರ ಹಂಚಿದ ಸಂಸದೆ

ಬ್ರಹ್ಮಾವರ, ಎ.5: ಇಲ್ಲಿಗೆ ಸಮೀಪದ ಬಾರಕೂರು ರುಕ್ಮಿಣಿ ಶೆಡ್ತಿ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ತೆರೆಯಲಾಗಿರುವ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರ ನಿರಾಶ್ರಿತರ ಶಿಬಿರಕ್ಕೆ ರವಿವಾರ ಬೆಳಗ್ಗೆ ಭೇಟಿ ನೀಡಿದ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅಲ್ಲಿರುವ 100ಕ್ಕೂ ಅಧಿಕ ಕಾರ್ಮಿಕರಿಗೆ ಬೆಳಗಿನ ಉಪಹಾರವನ್ನು ವಿತರಿಸಿದರು.
ಮಂಗಳೂರು ಭಾಗದಲ್ಲಿ ಕೆಲಸ ಮಾಡಿಕೊಂಡಿದ್ದ ಉತ್ತರ ಕರ್ನಾಟಕ ಭಾಗದ ಸುಮಾರು 375 ವಲಸೆ ಕಾರ್ಮಿಕರು ಜಿಲ್ಲೆಯಲ್ಲಿದ್ದು, ಇವರಲ್ಲಿ ಕೆಲವರನ್ನು ಕಾಪು ಮತ್ತು ತೆಕ್ಕಟ್ಟೆಗೆ ಕಳುಹಿಸಿ, ಉಡುಪಿ ಜಿಲ್ಲಾಡಳಿತ, ಬ್ರಹ್ಮಾವರ ತಾಲೂಕು ಆಡಳಿತ ಹಾಗೂ ಬಾರಕೂರು ಭಾಗದ ದಾನಿಗಳ ನೆರವಿನಿಂದ ತಾತ್ಕಾಲಿಕವಾಗಿ ನೆಲೆ ನಿಂತ 123 ಮಂದಿಗೆ ಬಾರಕೂರಿನ ಕಾಲೇಜಿನಲ್ಲಿ ಪ್ರಾರಂಭಿಸಲಾದ ನಿರಾಶ್ರಿತ ಶಿಬಿರದಲ್ಲಿ ಆಶ್ರಯ ನೀಡಲಾಗಿದೆ.
ಈ ಸಂದರ್ಭದಲ್ಲಿ ಅಲ್ಲಿರುವ ಶಿಬಿರಾರ್ಥಿಗಳಿಗೆ ಧೈರ್ಯ ತುಂಬಿ ಮಾತನಾಡಿದ ಸಂಸದೆ, ಸರಕಾರದ ಆದೇಶ ಬರುವ ತನಕ ನಿಮ್ಮನ್ನು ಇಲ್ಲಿ ಇರಿಸಲಾಗುತ್ತದೆ ಆ ಬಳಿಕ ನಿಮ್ಮ ಊರಿಗೆ ತೆರಳಬಹುದು. ನಿಮಗೆ ಇಲ್ಲಿ ಎಲ್ಲಾ ಸೌಕರ್ಯಗಳನ್ನು ಒದಗಿಸಲಾಗಿದೆ. ಆದರೆ ನೀವು ಗುರುತು ಪರಿಚಯ ಇಲ್ಲದವರು ನೀಡುವ ಯಾವುದೆ ಆಹಾರ ವಸ್ತುಗಳನ್ನು ಸ್ವೀಕರಿಸಬೇಡಿ ಎಂದು ನುಡಿದರು.
ಕಳೆದ 9 ದಿನದಿಂದ ಮಂದಾರ್ತಿ ಶ್ರೀದುರ್ಗಾ ಪರಮೇಶ್ವರೀ ದೇವಸ್ಥಾನ ದಿಂದ ಊಟ ವಿತರಣೆಯಾಗುತಿದ್ದರೆ, ಬಾರಕೂರು ಶಾಂತಾರಾಮ ಶೆಟ್ಟಿ ಅವರು ಎರಡು ಹೊತ್ತಿನ ಉಪಹಾರವನ್ನು ನೀಡುತಿದ್ದಾರೆ. ಇವರೊಂದಿಗೆ ಆಸುಪಾಸಿನ ಹಲವಾರು ದಾನಿಗಳು ಕೂಡಾ ಕೈ ಜೋಡಿಸಿದ್ದಾರೆ.
ಬ್ರಹ್ಮಾವರ ತಹಶೀಲ್ದಾರ ಕಿರಣ್‌ಗೌರಯ್ಯ, ಬಾರಕೂರು ಶಾಂತಾರಾಮ ಶೆಟ್ಟಿ, ದೇವದಾಸ್ ಹೊಸ್ಕೆರೆ, ಉಪತಹಶೀಲ್ದಾರ್ ದೇವರಾಜು, ಪೋಲೀಸ್ ಇಲಾಖೆ ಯ ಶಾಂತರಾಜು, ಕಂದಾಯ ನಿರೀಕ್ಷಕ ರಾದ ರಾಜು, ಶಿವಮಲ್ಲ, ಗ್ರಾಮ ಲೆಕ್ಕಿಗರಾದ ಗಿರೀಶ್ ಕುಮಾರ್, ಚೆಲುವ ರಾಜು, ಭೀಮರಾಜ್, ಜಯ ಶೆಟ್ಟಿ, ಅರುಣ್, ಶಿವರಾಜ್ ಕಟ್ಟಗಿ ಇನ್ನಿತರು ಉಪಸ್ಥಿತರಿದ್ದರು.
ಬ್ರಹ್ಮಾವರ ಭಾಗದಲ್ಲಿ ಕೂಡಾ ಹಲವು ದಾನಿಗಳು ಕೆಲವು ಕಡೆಯಲ್ಲಿ ನಮ್ಮ ಅರಿವಿಗೆ ಬಾರದೇ ಆಹಾರ ವಸ್ತುಗಳನ್ನು ನೀಡುತ್ತಿದ್ದಾರೆ. ಇದನ್ನು ತಾಲೂಕು ಆಡಳಿತದ ವ್ಯವಸ್ಥೆಯಲ್ಲಿ ನೀಡಬೇಕು. ಅದು ಹೊರತಾಗಿ ಯಾವೂದೆ ದಾನಿ ನೀಡಿದಲ್ಲಿ ಅಪರಾಧವಾಗುತ್ತದೆ ಹಾಗೂ ಆರೋಗ್ಯದ ವಿಷಯದಲ್ಲಿ ತೆಗೆದು ಕೊಂಡವರೇ ಹೊಣೆಗಾರರಾಗುತ್ತಾರೆ.
-ಕಿರಣ್ ಗೌರಯ್ಯ, ತಹಶೀಲ್ದಾರ ಬ್ರಹ್ಮಾವರ.








