ಹುಬ್ಬಳ್ಳಿ: ಕೊರೋನ ಸೋಂಕು ನಿವಾರಣೆಗೆ ನಿರ್ಮಾಣವಾಯಿತು 'ಸುರಂಗ ಮಾರ್ಗ' !

ಹುಬ್ಬಳ್ಳಿ, ಎ.5: ಕೊರೋನ ವೈರಸ್ ತಡೆಯಲು ಪ್ರತಿ ದಿನ ವಿನೂತನ ಪ್ರಯತ್ನಗಳು ನಡೆಯುತ್ತಲೇ ಇವೆ. ಅದೇ ರೀತಿಯಾಗಿ ಧಾರವಾಡ ಜಿಲ್ಲಾಡಳಿತ, ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯು ಸ್ಥಳೀಯ ಯಂಗ್ ಇಂಡಿಯಾ(ವೈಐ) ಹಾಗೂ ಕಾನ್ಫಿಡರೇಷನ್ ಆಫ್ ಇಂಡಿಯನ್ ಇಂಡಸ್ಟ್ರಿ(ಸಿಐಐ) ಸಹಯೋಗದಲ್ಲಿ ಅಮರಗೋಳದ ಎಪಿಎಂಸಿ ಮಹಾದ್ವಾರದ ಬಳಿ ಸೋಂಕು ತೊಡೆದು ಹಾಕುವ ದ್ರಾವಣ ಸಿಂಪಡಣಾ ಸುರಂಗ ನಿರ್ಮಿಸಿದೆ.
ಸಚಿವ ಜಗದೀಶ್ ಶೆಟ್ಟರ್ ಅವರು, ಸೋಂಕು ತೊಡೆದು ಹಾಕುವ ಸುರಂಗ ಸ್ಥಳಕ್ಕೆ ಭೇಟಿ ನೀಡಿ, ಈ ಸುರಂಗದ ರಚನೆ ಹಾಗೂ ನಿರ್ಮಾಣ ಪರಿಶೀಲಿಸಿ, ಈ ಕಾರ್ಯ ಮಾಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು.
ಯಂಗ್ ಇಂಡಿಯಾ ಸಂಸ್ಥೆ ಅಧ್ಯಕ್ಷ ಡಾ.ಶ್ರೀನಿವಾಸ ಜೋಷಿ ಮಾತನಾಡಿ, ಸುರಂಗದ 4 ಅಡಿ ಅಂತರದಲ್ಲಿ ವ್ಯಕ್ತಿಗಳು ಬಂದಾಗ ಸೆನ್ಸಾರ್ ಮೂಲಕ ಕಾರ್ಯ ಆರಂಭವಾಗುತ್ತದೆ. ಮನುಷ್ಯ ತೊಯ್ಯದ ಹಾಗೆ ಸೋಂಕು ನಿವಾರಕ ಸಿಂಪಡಣೆಯಾಗುತ್ತದೆ. ಇದರ ನಿರ್ಮಾಣಕ್ಕೆ 1 ಲಕ್ಷ ರೂ.ವೆಚ್ಚ ಮಾಡಲಾಗಿದೆ ಎಂದರು.
ಮಹಾನಗರ ಪಾಲಿಕೆ ಆಯುಕ್ತರು ಮಾತನಾಡಿ, ಹುಬ್ಬಳ್ಳಿ ಎಪಿಎಂಸಿಗೆ ಪ್ರತಿನಿತ್ಯ ಸಾವಿರಾರು ರೈತರು, ವ್ಯಾಪಾರಿಗಳಿಗೆ ಸೋಂಕು ಹರಡುವಿಕೆ ತಡೆಯಲು ಈ ಪ್ರಯತ್ನ ಮಾಡಲಾಗಿದೆ ಎಂದರು. ಜಿಲ್ಲಾಧಿಕಾರಿ ದೀಪಾ ಚೋಳನ್ ಉಪಸ್ಥಿತರಿದ್ದರು.







