ಲಾಕ್ಡೌನ್ ಎಫೆಕ್ಟ್: ದುಡಿಮೆಯಿಲ್ಲದೇ ಉಪವಾಸ ಬಿದ್ದಿದ್ದಾರೆ ದಿನಗೂಲಿ ಕಾರ್ಮಿಕರು !

ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ, ಎ.5: ಲಾಕ್ಡೌನ್ ಬಳಿಕ ದುಡಿಯುವ ವರ್ಗ ಸಂಕಷ್ಟಕ್ಕೆ ಸಿಲುಕಿದ್ದು, ಅದರಲ್ಲೂ ಅದೇ ದಿನ ದುಡಿದು ಅಂದಿನ ಹೊಟ್ಟೆ ಹೊರೆಯುತ್ತಿದ್ದ ದಿನಗೂಲಿಗಳು ಬಹುತೇಕ ಉಪವಾಸ ಅನುಭವಿಸುತ್ತಿದ್ದಾರೆ.
ಮನೆ ಬಿಟ್ಟು ಹೊರಬಂದರೆ ಪೊಲೀಸರು ಹೊಡೆಯುತ್ತಾರೆ. ಮನೆಯಲ್ಲಿ ನೋಡಿದರೆ ಹಿಡಿ ಅಕ್ಕಿ, ಬೇಳೆ, ಎಣ್ಣೆ ಯಾವುದೂ ಇಲ್ಲ. ಅಲ್ಲಿ ಇಲ್ಲಿ ಒಂದಿಷ್ಟು ಹಣ ತೆಗೆದುಕೊಂಡು ಅಂಗಡಿಗೆ ಹೋಗೋಣ ಎಂದರೆ ಎಲ್ಲಿಯೂ ದಿನಸಿ ಸಿಗುತ್ತಿಲ್ಲ...ಇದು ಹುಬ್ಬಳ್ಳಿ-ಧಾರವಾಡ ಅವಳಿನಗರದ ದುಡಿಯುವ ವರ್ಗ ವಾಸವಾಗಿರುವ ಆಶ್ರಯ ಕಾಲನಿಗಳ ಸದ್ಯದ ಸ್ಥಿತಿಯಾಗಿದೆ.
ಹೌದು, ಇಲ್ಲಿಯ ಅಮರಗೋಳ ಮಹಾತ್ಮಗಾಂಧಿ ಆಶ್ರಯ ಕಾಲನಿ ನಿವಾಸಿಗಳು ಹೊಟ್ಟೆಗೆ ಹಿಟ್ಟಿಲ್ಲದೇ ವಾರದಿಂದ ಪರದಾಡುತ್ತಿದ್ದಾರೆ. ಇದುವರೆಗೂ ನೀರು ಕುಡಿದು ಬದುಕು ಸಾಗಿಸಿದ್ದ ಎಷ್ಟೋ ಜನರು ಇನ್ನು ಸಾಧ್ಯವಿಲ್ಲ ಎಂದು ಮನೆಯಿಂದ ಹೊರ ಬರುವ ಪ್ರಯತ್ನ ನಡೆಸುತ್ತಿದ್ದಾರೆ.
ಗಂಡಂದಿರಿಗೂ ಕೆಲಸವಿಲ್ಲ. ಕೂಲಿ ಮಾಡಲು ಹೋಗುತ್ತಿದ್ದ ಮಹಿಳೆಯರೂ ಮನೆ ಹಿಡಿದು ಕುಳಿತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಪತಿ, ಪತ್ನಿ, ಮನೆಯಲ್ಲಿನ ಮಕ್ಕಳು ಎಲ್ಲರಿಗೂ ಉಪವಾಸ ಅನಿವಾರ್ಯವಾಗಿದೆ ಎಂದು ಹಲವರು ಅಳಲು ತೋಡಿಕೊಂಡಿದ್ದಾರೆ.
ಒಂದು ವಾರದಿಂದ ಉಪವಾಸ ಬಿದ್ದಿದ್ದೇವೆ. ಹೇಗೆ ಇದ್ದೀರಿ ಎಂದು ಕೇಳುವವರೂ ಯಾರು ಇಲ್ಲ. ವಾರಕ್ಕೊಮ್ಮೆ ನೀರು ಬಿಡುತ್ತಾರೆ. ಆ ನೀರನ್ನೇ ಕುಡಿದು ಜೀವನ ಸಾಗಿಸುತ್ತಿದ್ದೇವೆ ಕಾಲನಿ ನಿವಾಸಿಗಳು. ಒಂದಿಷ್ಟು ರೇಶನ್ ವ್ಯವಸ್ಥೆ ಮಾಡಿದರೇ ಅನುಕೂಲವಾಗುತ್ತದೆ. ಆಶ್ರಯ ಕಾಲನಿಯ ನಿವಾಸಿಗಳಾದ ಪುಷ್ಪಾ ಚನ್ನಪ್ಪನವರ, ಸಹನಾ ಜಾಂಬೋಟಿಕರ ಸೇರಿ ಹತ್ತಾರು ಜನರು ಅಳಲು ತೋಡಿಕೊಂಡಿದ್ದಾರೆ.







