ಸಿಆರ್‌ಪಿಎಫ್ ಮುಖ್ಯಸ್ಥ , ಅಧಿಕಾರಿಗಳಿಗೆ ಹೋಂ ಕ್ವಾರಂಟೈನ್
ಹೊಸದಿಲ್ಲಿ, ಎ.5: ಸಿಆರ್‌ಪಿಎಫ್‌ನ ಮುಖ್ಯ ವೈದ್ಯಾಧಿಕಾರಿಗೆ ಕೊರೋನ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರೊಂದಿಗೆ ಸಂಪರ್ಕದಲ್ಲಿದ್ದ ಸಿಆರ್‌ಪಿಎಫ್ ಮಹಾನಿರ್ದೇಶಕ ಎಪಿ ಮಹೇಶ್ವರಿ ಹಾಗೂ ಇತರ ಉನ್ನತ ಅಧಿಕಾರಿಗಳು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ ಎಂದು ವರದಿಯಾಗಿದೆ.
ಮಹೇಶ್ವರಿ ಹಾಗೂ ಇತರ ಉನ್ನತ ಅಧಿಕಾರಿಗಳ ಗಂಟಲು ದ್ರವದ ಮಾದರಿಯನ್ನು ್ನ ಪರೀಕ್ಷೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಸಿಆರ್‌ಪಿಎಫ್‌ನ ಸುಮಾರು 20 ಹಿರಿಯ ಅಧಿಕಾರಿಗಳು ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಆದರೆ ಮುಖ್ಯ ವೈದ್ಯಾಧಿಕಾರಿಯನ್ನು ಹೊರತುಪಡಿಸಿ ಸಿಆರ್‌ಪಿಎಫ್‌ನ ಇತರ ಯಾವುದೇ ಸಿಬಂದಿಗೆ ಕೊರೋನ ಸೋಂಕು ತಗುಲಿರುವುದು ದೃಢಪಟ್ಟಿಲ್ಲ. ಆದರೆ ಮುನ್ನೆಚ್ಚರಿಕೆಯ ಕ್ರಮವಾಗಿ ಮಹಾ ನಿರ್ದೇಶಕರು ಹಾಗೂ ಇತರ ಅಧಿಕಾರಿಗಳು ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ(ವರ್ಕ್ ಫ್ರಂ ಹೋಮ್) ಎಂದು ಸಿಆರ್‌ಪಿಎಫ್‌ನ ಪ್ರಕಟಣೆ ತಿಳಿಸಿದೆ. ಮುಖ್ಯ ವೈದ್ಯಾಧಿಕಾರಿಯೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಭದ್ರತಾ ಸಿಬಂದಿಯೊಬ್ಬ ಇತ್ತೀಚೆಗೆ ಎಪಿ ಮಹೇಶ್ವರಿಯೊಂದಿಗೆ ಛತ್ತೀಸ್‌ಗಢಕ್ಕೆ ತೆರಳಿದ್ದ ಎಂದು ಮೂಲಗಳು ತಿಳಿಸಿವೆ.
ಮುನ್ನೆಚ್ಚರಿಕೆ ಕ್ರಮವಾಗಿ, ನನ್ನ ಆರೋಗ್ಯ ತಪಾಸಣೆಯ ವರದಿ ಬರುವವರೆಗೆ ಮನೆಯಿಂದಲೇ ಕಾರ್ಯ ನಿರ್ವಹಿಸುತ್ತಿದ್ದೇನೆ ಎಂದು ಎಪಿ ಮಹೇಶ್ವರಿ ರವಿವಾರ ಟ್ವೀಟ್ ಮಾಡಿದ್ದಾರೆ.