ಕೊರೋನ ಹೆಸರಲ್ಲಿ ಕೋಮು ಪ್ರಚೋದನಕಾರಿ ಸುದ್ದಿ/ಚಿತ್ರ ಹರಡಿದರೆ ಕಠಿಣ ಕ್ರಮ: ದ.ಕ. ಎಸ್ಪಿ ಎಚ್ಚರಿಕೆ
''ಈಗಾಗಲೇ ಜಿಲ್ಲೆಯಲ್ಲಿ ನಾಲ್ಕು ಪ್ರಕರಣ ದಾಖಲು''

ಮಂಗಳೂರು, ಎ.6: ಕೊರೋನ ವೈರಸ್ ದ.ಕ. ಜಿಲ್ಲಾದ್ಯಂತ ಹಬ್ಬುತ್ತಿದ್ದು, ಈ ನಡುವೆ ಒಂದು ನಿದಿಷ್ಟ ಕೋಮನ್ನು ಗುರಿಯಾಗಿಸಿ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹಾಗೂ ಕೋಮು ಪ್ರಚೋಚದನಾಕಾರಿಯಾಗಿ ಸುದ್ದಿಗಳನ್ನು, ಬರಹಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬರುತ್ತಿದೆ. ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ಈ ಬಗ್ಗೆ ನಾಲ್ಕು ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಯಾವುದೇ ಕೋಮಿನ ಧಾರ್ಮಿಕತೆಗೆ ಧಕ್ಕೆಯಾಗುವಂತಹ ಫೇಸ್‌ಬುಕ್/ವಾಟ್ಸಾಪ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನಾಕಾರಿ ಸುದ್ದಿ/ಚಿತ್ರಗಳನ್ನು ಪ್ರಸಾರ ಮಾಡಿದರೆ ಅಂತಹ ಕಿಡಿಗೇಡಿಗಳ ಮೊಬೈಲ್ ವಶಪಡಿಸಿಕೊಳ್ಳಲಾಗುವುದು ಮತ್ತು ಅಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಹೋಂ ಕ್ವಾರಂಟೈನ್‌ನಲ್ಲಿರುವ ವ್ಯಕ್ತಿಗಳು ಇಂತಹ ಕುಕೃತ್ಯದಲ್ಲಿ ಭಾಗಿಯಾಗಿದ್ದರೆ ಅಂತಹವರನ್ನು ಆಸ್ಪತ್ರೆಯಲ್ಲಿ ಕ್ವಾರಂಟೈನ್‌ನಲ್ಲಿಟ್ಟು ಕ್ವಾರಂಟೈನ್ ಅವಧಿ ಮುಗಿದ ಕೂಡಲೇ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧೀಕ್ಷಕರು ಎಚ್ಚರಿಕೆ ನೀಡಿದ್ದಾರೆ.





