ಕೊರೋನ ಭೀತಿ: ಸತ್ತವರ ಅಂತ್ಯ ಸಂಸ್ಕಾರ ಮಾಡಲು ನಿರಾಕರಿಸುತ್ತಿರುವ ಬಂಧುಗಳು

ಚಂಡಿಗಡ,ಎ.8: ಪಂಜಾಬಿನ ಅಮೃತಸರದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತ ವ್ಯಕ್ತಿಯ ಅಂತ್ಯಸಂಸ್ಕಾರವನ್ನು ನಡೆಸಲು ಕುಟುಂಬವು ನಿರಾಕರಿಸಿರುವುದು ವರದಿಯಾಗಿದೆ.
ಅಮೃತಸರ ಮಹಾನಗರ ಪಾಲಿಕೆಯ ಮಾಜಿ ಅಧೀಕ್ಷಕ ಅಭಿಯಂತರ ಜಸ್ವಿಂದರ್ ಸಿಂಗ್ (65) ಅವರು ಕೊರೋನ ವೈರಸ್ ಸೋಂಕು ದೃಢಪಟ್ಟ ಎರಡು ದಿನಗಳ ಬಳಿಕ ಸರಕಾರಿ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು. ವೈದ್ಯಕೀಯ ವಿದ್ಯಾರ್ಥಿನಿಯಾಗಿರುವ ಸಿಂಗ್ ಅವರ ಪುತ್ರಿಯನ್ನು ಸಂಪರ್ಕಿಸಲು ಜಿಲ್ಲಾಡಳಿತವು ಪ್ರಯತ್ನಿಸಿತ್ತು. ಆದರೆ,ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳುವಂತೆ ಆಡಳಿತದ ಮನವಿಗೆ ಆಕೆ ಸ್ಪಂದಿಸಿರಲಿಲ್ಲ.
ಅಂತಿಮವಾಗಿ ಸರಕಾರಿ ಅಧಿಕಾರಿಗಳೇ ಸ್ಥಳೀಯ ಗುರುದ್ವಾರಾದ ಚಿತಾಗಾರದಲ್ಲಿ ಸಿಂಗ್ ಅವರ ಅಂತ್ಯಸಂಸ್ಕಾರವನ್ನು ನಡೆಸಿದರು. ಈ ವೇಳೆ ಕುಟುಂಬದ ಸದಸ್ಯರಾರೂ ಉಪಸ್ಥಿತರಿರಲಿಲ್ಲ ಎಂದು ಉಪ ವಿಭಾಗಾಧಿಕಾರಿ ವಿಕಾಸ ಹೀರಾ ಅವರು ಸುದ್ದಿಗಾರರಿಗೆ ತಿಳಿಸಿದರು.
ಪ್ರತ್ಯೇಕ ಘಟನೆಯಲ್ಲಿ ಲುಧಿಯಾನದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ವೃದ್ಧೆಯ ಅಂತ್ಯಸಂಸ್ಕಾರವನ್ನು ನಡೆಸಲು ಆಕೆಯ ಕುಟುಂಬವು ನಿರಾಕರಿಸಿದ ಬಳಿಕ ಜಿಲ್ಲಾಡಳಿತವೇ ಆ ಕಾರ್ಯವನ್ನು ನಡೆಸಿದೆ. ಅಮೃತಸರದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟ ಪದ್ಮಶ್ರೀ ಪುರಸ್ಕೃತ ಹಾಗೂ ಸ್ವರ್ಣ ಮಂದಿರದ ಮಾಜಿ ‘ಹಝೂರಿ ರಾಗಿ’ ಭಾಯಿ ನಿರ್ಮಲ ಸಿಂಗ್ ಖಾಲ್ಸಾ ಅವರ ಅಂತ್ಯಸಂಸ್ಕಾರಕ್ಕೆ ಸ್ವಗ್ರಾಮ ವೆರ್ಕಾದ ಗ್ರಾಮಸ್ಥರು ಅವಕಾಶ ನೀಡಿರಲಿಲ್ಲ.
ಕೋವಿಡ್-19 ಸೋಂಕು ತಮಗೂ ತಗುಲಬಹುದು ಎಂಬ ಭೀತಿಯಿಂದ ತಮ್ಮವರ ಅಂತ್ಯಸಂಸ್ಕಾರಗಳನ್ನು ನಡೆಸಲು ದೇಶದ ವಿವಿಧ ಭಾಗಗಳಲ್ಲಿಯ ಕುಟುಂಬಗಳು ನಿರಾಕರಿಸುತ್ತಿದ್ದು, ಈ ಸಾಂಕ್ರಾಮಿಕ ಪಿಡುಗು ಭಾರತದಲ್ಲಿ ಅಂತ್ಯಸಂಸ್ಕಾರ ವಿಧಿಗಳಲ್ಲಿ ನಾಟಕೀಯ ಬದಲಾವಣೆಗಳಿಗೆ ಕಾರಣವಾಗಿದೆ.
ಕೊರೋನ ವೈರಸ್ ಸೋಂಕಿನಿಂದ ಮೃತರ ಶವಗಳ ವಿಲೇವಾರಿಗಾಗಿ ಕೇಂದ್ರವು ಮಾ.15ರಂದು ಹೊರಡಿಸಿರುವ ನೂತನ ಮಾರ್ಗಸೂಚಿಯಂತೆ,ಅಂತ್ಯಸಂಸ್ಕಾರದಲ್ಲಿ ಭಾಗವಹಿಸುವವರ ಸಂಖ್ಯೆ 20ನ್ನು ಮೀರುವಂತಿಲ್ಲ. ಶವಕ್ಕೆ ಸ್ನಾನ ಅಥವಾ ಎಂಬಾಮಿಂಗ್ ಅನ್ನೂ ನಿಷೇಧಿಸಲಾಗಿದ್ದು,ಸೋಂಕು ಪ್ರಸರಣದ ಅಪಾಯವನ್ನು ನಿವಾರಿಸಲು ಬಂಧುಗಳು ಶವವನ್ನು ಚುಂಬಿಸುವಂತಿಲ್ಲ ಅಥವಾ ತಬ್ಬಿಕೊಳ್ಳುವಂತಿಲ್ಲ.







