ಉ.ಪ್ರದೇಶ: 15 ಜಿಲ್ಲೆಗಳಲ್ಲಿ ಆಂಶಿಕ ಬೀಗಮುದ್ರೆ
ಲಕ್ನೊ, ಎ.8: ಅತ್ಯಧಿಕ ಕೊರೋನ ವೈರಸ್ ಸೋಂಕು ದೃಢಪಟ್ಟಿರುವ ಉತ್ತರಪ್ರದೇಶದ 15 ಜಿಲ್ಲೆಗಳ ಕೆಲವು ಪ್ರದೇಶಗಳನ್ನು ಹಾಟ್ಸ್ಪಾಟ್ ಎಂದು ಗುರುತಿಸಲಾಗಿದ್ದು ಎಪ್ರಿಲ್ 15ರವರೆಗೆ ಸೀಲ್ ಮಾಡಲಾಗುವುದು ಎಂದು ರಾಜ್ಯದ ಮುಖ್ಯ ಕಾರ್ಯದರ್ಶಿ ಆರ್ಕೆ ತಿವಾರಿ ಹೇಳಿದ್ದಾರೆ.
ಎ.8ರ ಮಧ್ಯರಾತ್ರಿಯಿಂದಲೇ ಇದು ಜಾರಿಗೆ ಬರಲಿದ್ದು, ಈ ಪ್ರದೇಶಗಳ ಜನರ ಮನೆಗೆ ಅವಶ್ಯಕ ಸಾಮಾಗ್ರಿಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿವಾರಿ ಮಾಹಿತಿ ನೀಡಿದ್ದಾರೆ.
ಲಕ್ನೊ, ಗೌತಮ ಬುದ್ಧ ನಗರ, ನೋಯ್ಡೊ, ಗಾಝಿಯಾಬಾದ್, ಮೀರತ್, ಆಗ್ರಾ, ಶಾಮ್ಲಿ, ಸಹಾರನ್ಪುರ ನಗರಗಳು ಇದರಲ್ಲಿ ಸೇರಿವೆ. ಲಾಕ್ಡೌನ್ ಮುಂದುವರಿಯಬಹುದು ಎಂದು ಪ್ರಧಾನಿ ಮೋದಿ ಸುಳಿವು ನೀಡಿದ ಬಳಿಕ ಉತ್ತರಪ್ರದೇಶ ಸರಕಾರ ಈ ನಿರ್ಧಾರಕ್ಕೆ ಬಂದಿದೆ.
ಉತ್ತರಪ್ರದೇಶದಲ್ಲಿ ಬುಧವಾರದವರೆಗೆ 326 ಜನರಲ್ಲಿ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು ಮೂವರು ಮೃತಪಟ್ಟಿದ್ದಾರೆ.
Next Story