ಮೇಕರ್ಸ್ ಹಬ್ ವಿದ್ಯಾರ್ಥಿಗಳಿಂದ ಸಿದ್ಧಗೊಂಡ “ಫೇಸ್ ಶೀಲ್ಡ್” ತಾಲೂಕಾಸ್ಪತ್ರೆಗೆ ಹಸ್ತಾಂತರ

ಭಟ್ಕಳ : ಕೊರೋನ ಮಹಾಮಾರಿಯ ವಿರುದ್ಧ ತಮ್ಮ ಪ್ರಾಣವನ್ನು ಒತ್ತೆಯಿಟ್ಟು ಹಗಲಿರುಳು ಹೋರಾಡುತ್ತಿರುವ ವೈದ್ಯಕೀಯ ಸಿಬ್ಬಂದಿಗಳ ಉಪಯೋಗಕ್ಕಾಗಿಯೇ ಇಲ್ಲಿನ “ಮೇಕರ್ಸ್ ಹಬ್” ವಿದ್ಯಾರ್ಥಿಗಳಿಂದ ವಿಶೇಷವಾಗಿ ವಿನ್ಯಾಸಗೊಂಡಿರುವ ‘ಫೇಸ್ ಶೀಲ್ಡ್’ ನ್ನು(ಮುಖಕ್ಕೆ ಗುರಾಣಿಯಂತೆ ಬಳಸಲ್ಪಡುವ ಸಾಧನ) ಬುಧವಾರ ಇಲ್ಲಿನ ತಾಲೂಕಾ ಆಸ್ಪತ್ರೆಯ ವೈದ್ಯಕೀಯ ಸಿಬ್ಬಂದಿ ಹಾಗೂ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಗಳಿಗೆ ಹಸ್ತಾಂತರಿಸಿದರು.
ಈ ಕುರಿತಂತೆ ಮಾಹಿತಿ ನೀಡಿದ ಮೇಕರ್ಸ್ ಹಬ್ ಸದಸ್ಯ ನುಹೇಲ್ ದಾಮೋದಿ, ಕೊರೋನ ವಿರುದ್ಧದ ಹೋರಾಟದಲ್ಲಿ ಸಕ್ರೀಯರಾಗಿರುವ ವೈದ್ಯಕೀಯ ಸಿಬ್ಬಂದಿಗಳಿಗೆ ಪೇಸ್ ಮಾಸ್ಕ್ ಜೊತೆಗೆ ಫೇಸ್ ಶೀಲ್ಡ್ ಧರಿಸುವುದರಿಂದ ಕೊರೋನಾ ಸೋಂಕು ಕಣ್ಣುಗಳಿಗೆ ಹರಡುವುದನ್ನು ತಪ್ಪಿಸಬಹುದು, ಅಂಜುಮನ್ ತಾಂತ್ರಿಕ ಮಹಾವಿದ್ಯಾಲಯದ ಅಲುಮ್ನಿ ವಿದ್ಯಾರ್ಥಿಗಳು ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಚ್ಚಿನ ಅನುಭವನ್ನು ಗಳಿಸಲು ಹುಟ್ಟು ಹಾಕಿದ ಮೇಕರ್ಸ್ ಹಬ್ ಸಂಸ್ಥೆಯಿಂದ ವಿದ್ಯಾರ್ಥಿಗಳಲ್ಲಿ ತಂತ್ರಜ್ಞಾನದ ಅವಿಷ್ಕಾರಗಳ ಕಡೆ ಹೆಚ್ಚಿನ ಒಲವು ಮೂಡು ವಂತಾಗಿದೆ. ವೈದ್ಯಕೀಯ ಸಿಬ್ಬಂದಿಗಳಿಗೆ ಹಾಗೂ ಕೊರೋನ ಹೋರಾಟದಲ್ಲಿ ತಮ್ಮ ಅಳಿಲು ಸೇವೆ ಇರಲಿ ಎಂಬ ಉದ್ದೇಶದೊಂದಿಗೆ ಮೇಕರ್ಸ್ ಹಬ್ ವಿದ್ಯಾರ್ಥಿಗಳು ತಮ್ಮ ಸ್ವಂತ ಖರ್ಚಿನಿಂದ ಈ ಸಾಧನಾ ಗಳನ್ನು ಸಿದ್ಧಗೊಳಿಸಿದ್ದಾರೆ.
ವೈದ್ಯಕೀಯ ಸಿಬ್ಬಂದಿಗಳಿಗೆ 60 ಹಾಗೂ ಸಹಾಯಕ ಆಯುಕ್ತರ ಕಚೇರಿಗೆ 40 ಒಟ್ಟು ನೂರು ಫೇಸ್ ಶೀಲ್ಡ್ ಗಳನ್ನು ಸಿದ್ಧಗೊಳಿಸಿ ವಿತರಿಸಲಾಗಿದೆ ಎಂದು ತಿಳಿಸಿದರು. ಅಂಜುಮನ್ ಪಿಯು ಕಾಲೇಜ್ ವಿದ್ಯಾರ್ಥಿಗಳ ಸಹಕಾರದೊಂದಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸ್ವಯಂ ಚಾಲಿತ ಸೆನಿಟೈಸರ್ ಗಳನ್ನು ಅಭಿವೃದ್ಧಿಗೊಳಿಸುವ ಯೋಜನೆಯಿದ್ದು ಆಸಕ್ತರು ಈ ಯೋಜನೆಯಲ್ಲಿ ಪಾಲ್ಗೊಳ್ಳಬಹುದಾಗಿದೆ ಹೆಚ್ಚಿನ ಮಾಹಿತಿಗಾಗಿ 9731840753 ಸಂಪರ್ಕಿಸಬಹುದಾಗಿದೆ ಎಂದೂ ಅವರು ಕೋರಿದ್ದಾರೆ.
ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಕೋವಿಡ್-19 ನೂಡಲ್ ಅಧಿಕಾರಿ ಡಾ.ಶರದ್ ನಾಯಕ, ಮೇಕರ್ಸ್ ಹಬ್ ಸದಸ್ಯರಾದ ನುಹೇಲ್ ದಾಮೋದಿ, ಶೀಹ್‍ಝಾನ್ ಮೊಹತೆಶಮ್, ಎಸ್.ಎಂ.ಶುಯೇಬ್ ಮಾರ್ಕೆಟ್, ಮುಹಮ್ಮದ್ ಖಮರ್ ತಾಲೂಕಾಸ್ಪತ್ರೆ ಹಾಗೂ ಸಹಾಯಕ ಆಯುಕ್ತರ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.






.jpg)


