ಅಮೆರಿಕದಲ್ಲಿ ವಿಷಮಿಸುತ್ತಿರುವ ಕೊರೋನ ವೈರಸ್ ಪರಿಸ್ಥಿತಿ ಒಂದೇ ದಿನದಲ್ಲಿ 1,939 ಸಾವು

ವಾಶಿಂಗ್ಟನ್, ಎ. 8: ಅಮೆರಿಕದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊರೋನ ವೈರಸ್‌ನಿಂದಾಗಿ 1,939 ಮಂದಿ ಮೃತಪಟ್ಟಿದ್ದಾರೆ ಎಂದು ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯ ಮಂಗಳವಾರ ತಿಳಿಸಿದೆ. ಇದು ಕೊರೋನ ವೈರಸ್ ಸಾವಿನ ದೈನಂದಿನ ದಾಖಲೆಯಾಗಿದೆ.
ಇದರೊಂದಿಗೆ ಅಮೆರಿಕದಲ್ಲಿ ಈವರೆಗೆ ಈ ಭೀಕರ ಸಾಂಕ್ರಾಮಿಕ ರೋಗದಿಂದಾಗಿ ಪ್ರಾಣ ಕಳೆದುಕೊಂಡವರ ಒಟ್ಟು ಸಂಖ್ಯೆ 12,722ಕ್ಕೆ ಏರಿದೆ. ಕೊರೋನ ವೈರಸ್ ಸಾಂಕ್ರಾಮಿಕ ಕಾಯಿಲೆಯಿಂದಾಗಿ ಅತಿ ಹೆಚ್ಚಿನ ಸಾವುಗಳನ್ನು ಕಂಡಿರುವ ಇಟಲಿ ಮತ್ತು ಸ್ಪೇನ್‌ಗೆ ಅಮೆರಿಕ ಈಗ ತೀವ್ರ ಸ್ಪರ್ಧೆಯನ್ನು ನೀಡುತ್ತಿದೆ. ಇಟಲಿಯಲ್ಲಿ ಸತ್ತವರ ಒಟ್ಟು ಸಂಖ್ಯೆ 17,127ಕ್ಕೆ ಏರಿದರೆ, ಸ್ಪೇನ್‌ನಲ್ಲಿ ಈ ಸಂಖ್ಯೆ 13,798 ಆಗಿದೆ.
ನ್ಯೂಯಾರ್ಕ್‌ನಲ್ಲಿ ಒಂದೇ ದಿನದಲ್ಲಿ 731 ಸಾವು
ಕಳೆದ 24 ಗಂಟೆಗಳ ಅವಧಿಯಲ್ಲಿ ನ್ಯೂಯಾರ್ಕ್ ರಾಜ್ಯದಲ್ಲಿ ಕೋವಿಡ್-19 ಕಾಯಿಲೆಗೆ ಸಂಬಂಧಿಸಿದ ಗರಿಷ್ಠ ಸಾವುಗಳು ಸಂಭವಿಸಿವೆ ಎಂದು ಗವರ್ನರ್ ಆ್ಯಂಡ್ರೂ ಕುವೋಮೊ ಮಂಗಳವಾರ ಹೇಳಿದ್ದಾರೆ.
ಈ ಅವಧಿಯಲ್ಲಿ ಕೊರೋನ ವೈರಸ್‌ನಿಂದಾಗಿ 731 ಮಂದಿ ಮೃತಪಟ್ಟಿದ್ದಾರೆ ಎಂದು ಅವರು ತಿಳಿಸಿದರು. ಇದರೊಂದಿಗೆ ರಾಜ್ಯದಲ್ಲಿ ಕೊರೋನ ವೈರಸ್‌ನಿಂದಾಗಿ ಈವರೆಗೆ ಸತ್ತಿರುವವರ ಒಟ್ಟು ಸಂಖ್ಯೆ 5,489ಕ್ಕೆ ಏರಿದೆ.
ಈ ಹಿಂದಿನ ಒಂದೇ ದಿನದ ದಾಖಲೆ 630 ಶುಕ್ರವಾರ ದಾಖಲಾಗಿತ್ತು. ನ್ಯೂಯಾರ್ಕ್ ಈಗ ಅಮೆರಿಕದ ಕೊರೋನ ವೈರಸ್ ಕೇಂದ್ರಬಿಂದುವಾಗಿದೆ.
ಭಾರತೀಯ-ಅಮೆರಿಕನ್ ಪತ್ರಕರ್ತ ಸಾವು
ಹಿರಿಯ ಭಾರತೀಯ ಅಮೆರಿಕನ್ ಪತ್ರಕರ್ತ ಬ್ರಹ್ಮ ಕಂಚಿಭೋಟ್ಲ ನ್ಯೂಯಾರ್ಕ್‌ನ ಆಸ್ಪತ್ರೆಯೊಂದರಲ್ಲಿ ಸೋಮವಾರ ರಾತ್ರಿ ಕೊರೋನವೈರಸ್ ಕಾಯಿಲೆಗೆ ಬಲಿಯಾಗಿದ್ದಾರೆ. ಅವರು ‘ಯುನೈಟೆಡ್ ನ್ಯೂಸ್ ಆಫ್ ಇಂಡಿಯ’ ಸುದ್ದಿಸಂಸ್ಥೆಯ ಮಾಜಿ ವರದಿಗಾರರಾಗಿದ್ದರು.
ಹಲವಾರು ಭಾರತ ಮೂಲದ ಅಮೆರಿಕನ್ನರು ಈಗಾಗಲೇ ಕೊರೋನ ವೈರಸ್‌ನಿಂದಾಗಿ ಮೃತಪಟ್ಟಿದ್ದಾರೆ. ಇನ್ನೂ ಹಲವಾರು ಮಂದಿ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.







