3ನೇ ದಿನವೂ ಬ್ರಿಟನ್ ಪ್ರಧಾನಿ ತೀವ್ರ ನಿಗಾ ಘಟಕದಲ್ಲಿ

ಲಂಡನ್, ಎ. 8: ನೋವೆಲ್-ಕೊರೋನವೈರಸ್ ಸೋಂಕಿಗೆ ಒಳಗಾಗಿರುವ ಬ್ರಿಟಿಶ್ ಪ್ರಧಾನಿ ಬೊರಿಸ್ ಜಾನ್ಸನ್, ಮೂರನೇ ದಿನವಾದ ಬುಧವಾರವೂ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಕಳೆದಿದ್ದಾರೆ.
‘‘ಪ್ರಧಾನಿಯ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಹಾಗೂ ಅವರು ಆರಾಮವಾಗಿದ್ದಾರೆ ಎಂಬ ಮಾಹಿತಿ ನನಗೆ ಲಭಿಸಿದೆ’’ ಎಂದು ಸಹಾಯಕ ಆರೋಗ್ಯ ಸಚಿವ ಎಡ್ವರ್ಡ್ ಆರ್ಗರ್ ‘ಸ್ಕೈ ನ್ಯೂಸ್’ಗೆ ತಿಳಿಸಿದರು.
‘‘ಹಿಂದೆ ಅವರು ಸ್ವಲ್ಪ ಆಮ್ಲಜನಕ ತೆಗೆದುಕೊಂಡಿದ್ದರು. ಆದರೆ, ಈಗ ಅವರು ಕೃತಕ ಉಸಿರಾಟ ವ್ಯವಸ್ಥೆಯಲ್ಲಿಲ್ಲ’’ ಎಂದು ಅವರು ಹೇಳಿದರು.
ಬ್ರಿಟನ್‌ನ ಪ್ರಮುಖ ಶ್ವಾಸಕೋಶ ವೈದ್ಯರೊಬ್ಬರು 55 ವರ್ಷದ ಬೊರಿಸ್ ಜಾನ್ಸನ್‌ಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ‘ಡೇಲಿ ಟೆಲಿಗ್ರಾಫ್’ ಪತ್ರಿಕೆ ವರದಿ ಮಾಡಿದೆ.
ಕೋವಿಡ್-19 ಕಾಯಿಲೆಯ ಸೋಂಕಿಗೆ ಒಳಗಾದ 10 ದಿನಗಳ ಬಳಿಕವೂ ಅವರಲ್ಲಿ ಕೆಮ್ಮು ಮತ್ತು ಅಧಿಕ ಜ್ವರ ಮುಂದುವರಿದ ಹಿನ್ನೆಲೆಯಲ್ಲಿ ಅವರನ್ನು ರವಿವರ ರಾತ್ರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಅವರನ್ನು ತೀವ್ರ ನಿಗಾ ಘಟಕಕ್ಕೆ ವರ್ಗಾಯಿಸಲಾಯಿತು.
ತುರ್ತು ಪರಿಸ್ಥಿತಿಯ ಅವಧಿಯೊಂದರಲ್ಲಿ ದೇಶವೊಂದರ ಮುಖ್ಯಸ್ಥರೇ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುವುದು ಅಭೂತಪೂರ್ವವಾಗಿದೆ.
ಬ್ರಿಟನ್: 24 ಗಂಟೆಯಲ್ಲಿ 786 ಸಾವು
ಕೊರೋನ ವೈರಸ್‌ನಿಂದಾಗಿ 24 ಗಂಟೆಗಳ ಅವಧಿಯಲ್ಲಿ 786 ಸಾವುಗಳು ಸಂಭವಿಸಿವೆ ಎಂದು ಬ್ರಿಟನ್ ಮಂಗಳವಾರ ವರದಿ ಮಾಡಿದೆ. ಸತ್ತವರ ಸಂಖ್ಯೆಯಲ್ಲಿ ಎರಡು ದಿನ ಇಳಿಕೆ ಕಂಡುಬಂದ ಬಳಿಕ, ಸಂಖ್ಯೆಯು ಒಮ್ಮೆಲೇ ಏರಿದೆ.







