ಮಲೇರಿಯಾ ಔಷಧಿ ರಫ್ತು ನಿರ್ಬಂಧ ತೆರವು ಭಾರತವನ್ನು ಹನುಮಾನ್‌ಗೆ ಹೋಲಿಸಿದ ಬ್ರೆಝಿಲ್ ಅಧ್ಯಕ್ಷ

ಸಾವೋಪೌಲೋ (ಬ್ರೆಝಿಲ್), ಎ. 8: ನೂತನ-ಕೊರೋನ ವೈರಸ್ ಸೋಂಕಿನ ಚಿಕಿತ್ಸೆಯಲ್ಲಿ ಬಳಸಲಾಗುವ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ರಫ್ತಿನ ಮೇಲಿನ ನಿರ್ಬಂಧಗಳನ್ನು ತೆರವುಗೊಳಿಸಿರುವುದಕ್ಕಾಗಿ ಬ್ರೆಝಿಲ್ ಅಧ್ಯಕ್ಷ ಜೈರ್ ಬೊಲ್ಸೊನಾರೊ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ, ಬೊಲ್ಸೊನಾರ್ ಭಾರತದ ಈ ಕ್ರಮವನ್ನು ರಾಮಾಯಣದ ಹನುಮಾನ್ ಮತ್ತು ಸಂಜೀವಿನಿ ಔಷಧಿಗೆ ಹೋಲಿಸಿದ್ದಾರೆ.
‘‘ರಾಮನ ಸಹೋದರ ಲಕ್ಷ್ಮಣನ ಪ್ರಾಣವನ್ನು ರಕ್ಷಿಸುವುದಕ್ಕಾಗಿ ಹನುಮಂತನು ಹಿಮಾಲಯದಿಂದ ಸಂಜೀವಿನಿ ಪರ್ವತವನ್ನು ತಂದ ಹಾಗೆ ಹಾಗೂ ಯೇಸು ಕಾಯಿಲೆಪೀಡಿತರನ್ನು ಗುಣಪಡಿಸಿ ಬಾರ್ತಿಮೊನ ದೃಷ್ಟಿಯನ್ನು ಮರಳಿಸಿದ ಹಾಗೆ, ಭಾರತ ಮತ್ತು ಬ್ರೆಝಿಲ್ ಈ ಜಾಗತಿಕ ಬಿಕ್ಕಟ್ಟಿನ ವಿರುದ್ಧ ಗೆಲುವು ಸಾಧಿಸುತ್ತವೆ’’ ಎಂದು ಪ್ರಧಾನಿ ಮೋದಿಗೆ ಬರೆದ ಪತ್ರದಲ್ಲಿ ಬ್ರೆಝಿಲ್ ಅಧ್ಯಕ್ಷರು ಹೇಳಿದ್ದಾರೆ.
ಭಾರತ ಜಗತ್ತಿನಲ್ಲೇ ಹೈಡ್ರಾಕ್ಸಿಕ್ಲೋರೋಕ್ವಿನ್ ಔಷಧಿಯ ಅತಿ ದೊಡ್ಡ ಉತ್ಪಾದಕ ಮತ್ತು ರಫ್ತು ದೇಶವಾಗಿದೆ. ಆದರೆ, ಶನಿವಾರ ವಿದೇಶಿ ವ್ಯಾಪಾರ ಮಹಾ ನಿರ್ದೇಶನಾಲಯವು ಈ ಔಷಧಿಯ ರಫ್ತಿನ ಮೇಲೆ ನಿಷೇಧ ವಿಧಿಸಿತ್ತು.





